– ಇಂದು ಮಧ್ಯಾಹ್ನ ನಡೆಯಿತು ಆಘಾತಕಾರಿ ಘಟನೆ
– ಕಚೇರಿಯಲ್ಲೇ ಪ್ರಾಣಬಿಟ್ಟ ತಹಶೀಲ್ದಾರ್
ತೆಲಂಗಾಣ: ಕಚೇರಿಗೆ ನುಗ್ಗಿ ಮಹಿಳಾ ತಹಶೀಲ್ದಾರ್ ಒಬ್ಬರನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಹೈದರಾಬಾದ್‌ನ ಹೈಯತ್ ನಗರದಲ್ಲಿ ನಡೆದಿದೆ.
ಮೃತ ಮಹಿಳಾ ತಹಶೀಲ್ದಾರನ್ನು ವಿಜಯರೆಡ್ಡಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಕಚೇರಿಗೆ ಬಂದ ಗೌರಲ್ಲಿ ಗ್ರಾಮದ ನಿವಾಸಿ ಸುರೇಶ್ ರೆಡ್ಡಿ ಕೆಲ ಕಾಲ ವಿಜಯ ಅವರ ಜೊತೆ ಮಾತನಾಡಿ ನಂತರ ತಕ್ಷಣ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
Advertisement
Advertisement
ಊಟದ ಸಮಯದಲ್ಲಿ ಯಾರು ಇಲ್ಲದನ್ನು ಗಮನಿಸಿದ ಆತ ಬಂದು ಈ ಕೃತ್ಯ ಮಾಡಿದ್ದಾನೆ. ಕಚೇರಿಯ ಒಳಗೆ ಬೆಂಕಿ ಹಚ್ಚಿದ ಕಾರಣ ನೋವನ್ನು ತಳಲಾರದೆ ತಹಶೀಲ್ದಾರ್ ವಿಜಯ ಕಚೇರಿಯಿಂದ ಕಾಪಾಡಿ ಎಂದು ಹೊರಗೆ ಬಂದು ಬಾಗಿಲ ಬಳಿ ಬಿದ್ದು ನರಳುತ್ತಾ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸುರೇಶ್ ರೆಡ್ಡಿಗೂ ಗಂಭೀರ ಗಾಯವಾಗಿದ್ದು, ಆತನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
Advertisement
ಈ ಘಟನೆ ನಡೆದ ವೇಳೆ ಕಚೇರಿಯಲ್ಲಿದ್ದ ಅಟೆಂಡರ್ ಮತ್ತು ಕಾರು ಚಾಲಕ ಒಳಗೆ ಹೋಗಿ ಅವರನ್ನು ಉಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿ ಜಾಸ್ತಿಯಾದ ಕಾರಣ ಅವರನ್ನು ಉಳಿಸಲು ಆಗಿಲ್ಲ. ಈ ವೇಳೆ ಈ ಇಬ್ಬರು ನೌಕರರಿಗೂ ಗಂಭೀರವಾದ ಗಾಯವಾಗಿದ್ದು, ಅವರನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾಚಕೊಂಡ ನಗರದ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್, ಮಧ್ಯಾಹ್ನ ಸುಮಾರು ೧.೪೦ರ ವೇಳೆಗೆ ಸುರೇಶ್ ಕಚೇರಿಯೊಳಗೆ ಬಂದಿದ್ದಾನೆ. ಊಟದ ಸಮಯವಾದ ಕಾರಣ ಜಾಸ್ತಿ ನೌಕರರು ಕಚೇರಿಯಲ್ಲಿ ಇರಲಿಲ್ಲ. ಸ್ವಲ್ಪ ಸಮಯ ವಿಜಯ ರೆಡ್ಡಿ ಜೊತೆ ಮಾತನಾಡಿದ ಸುರೇಶ್ ನಂತರ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಸುರೇಶ್ ರೆಡ್ಡಿ ಬಚರಾಮ್ ನಗರದಲ್ಲಿ ಏಳು ಎಕ್ರೆ ಜಮೀನು ತೆಗೆದುಕೊಂಡಿದ್ದು, ಇದು ಪತ್ರದ ವಿಚಾರದಲ್ಲಿ ವಿವಾದವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರವಾಗಿ ಆತ ಕಚೇರಿಗೆ ಬಂದಿದ್ದ ಎಂದು ಹೇಳಲಾಗಿದೆ. ಆದರೆ ಆತ ಏಕೆ ವಿಜಯ ರೆಡ್ಡಿ ಅವರನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಿದ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ.
ಈಗ ಪ್ರಸ್ತುತ ಆರೋಪಿ ನಮ್ಮ ವಶದಲ್ಲಿದ್ದಾನೆ ಮತ್ತು ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸೆಕ್ಷನ್ ೩೦೨ (ಕೊಲೆ) ಮತ್ತು ೩೦೭ (ಕೊಲೆ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಬಳಿಕ ಕಚೇರಿ ಎದುರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದ್ದರು.