ಹೈದರಾಬಾದ್: ಮಹಿಳೆಯೊಬ್ಬರ ಫೇಸ್‌ಬುಕ್ ಖಾತೆಗೆ ಅನಧಿಕೃತ ರೀತಿಯಲ್ಲಿ ಲಾಗಿನ್ ಆಗಿ ಆಕೆಯ ಸ್ನೇಹಿತರಿಂದ ಹಣ ಪಡೆಯಲು ಯತ್ನಿಸಿದ್ದ ಟೆಕ್ಕಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ರಂಗಾ ರೆಡ್ಡಿ ಜಿಲ್ಲೆಯ ಜಿಲ್ಲೇಲಗುಡಾ ನಿವಾಸಿ ಬಾಥುಲಾ ವೆಂಕಟೇಶ್ವರ (24) ಬಂಧಿತ ಆರೋಪಿ. ರಾಚಕೊಂಡ ಸೈಬರ್ ಅಪರಾಧ ಪೊಲೀಸರು ಆರೋಪಿ ವೆಂಕಟೇಶ್ವರನನ್ನು ಬಂಧಿಸಿದ್ದಾರೆ. ಬಿಟೆಕ್ ಪದವೀಧರನಾದ ವೆಂಕಟೇಶ್ವರನು ಪ್ರಸ್ತುತ ಮಾಧಾಪುರ ಮೂಲದ ಕಂಪ್ಯೂಟರ್ ಗ್ರಾಫಿಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.
Advertisement
Advertisement
ನನ್ನ ಫೇಸ್‌ಬುಕ್ ಖಾತೆಗೆ ಸೆಪ್ಟೆಂಬರ್ 2019ರಿಂದ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ವೈದ್ಯಕೀಯ ಚಿಕಿತ್ಸೆಯ ಸುಳ್ಳು ನೆಪದಲ್ಲಿ ಯಾರೋ ನನ್ನ ಆನ್‌ಲೈನ್ ಸ್ನೇಹಿತರಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಫೇಸ್‌ಬುಕ್ ಸ್ನೇಹಿತರೊಬ್ಬರು ವೈಯಕ್ತಿಕವಾಗಿ ಸಂಪರ್ಕಿಸಿ, ಮಾಹಿತಿ ನೀಡಿದಾಗ ಈ ವಿಚಾರ ಗಮನಕ್ಕೆ ಬಂದಿದೆ ಎಂದು ಮಹಿಳೆ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದರು.
Advertisement
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾಗ ಆರೋಪಿ ವೆಂಕಟೇಶ್ವರ ಸಿಕ್ಕಿಬಿದ್ದಿದ್ದ. ಆತನನ್ನು ಬಂಧಿಸಿದ ವಿಚಾರಣೆಗೆ ಒಳಪಡಿಸಿದಾಗ, ಫಿಶಿಂಗ್ ವೆಬ್‌ಸೈಟ್‌ನಿಂದ ಲಿಂಕ್ ಅನ್ನು ಮಹಿಳೆಗೆ ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಮಹಿಳೆಯ ಫೇಸ್‌ಬುಕ್ ಖಾತೆಯ ಐಡಿ ಮತ್ತು ಪಾಸ್‌ವರ್ಡ್ ಅನ್ನು ಕದ್ದಿದ್ದಾನೆ. ಬಳಿಕ ಖಾತೆಗೆ ಲಾಗ್ ಇನ್ ಮಾಡಿ, ಪಾಸ್‌ವರ್ಡ್ ಬದಲಾಯಿಸಿದ್ದ. ಅಷ್ಟೇ ಅಲ್ಲದೆ ಮಹಿಳೆಗೆ ಪಾಸ್‌ವರ್ಡ್ ಬದಲಾಯಿಸಲು ಸಾಧ್ಯವಾಗದಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿಯು ಮಹಿಳೆಯ ಕೆಲವು ಆನ್‌ಲೈನ್ ಸ್ನೇಹಿತರೊಂದಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಚಾಟ್ ಮಾಡಲು ಪ್ರಾರಂಭಿಸಿದ್ದ. ಈ ವೇಳೆ ವೆಂಕಟೇಶ್ವರ, ಮಹಿಳೆಯ ಸೋಗಿನಲ್ಲಿ ವೈದ್ಯಕೀಯ ಬಿಲ್ ಪಾವತಿಸಲು ಸಣ್ಣ ಮೊತ್ತದ ಹಣವನ್ನು ನೀಡುವಂತೆ ಕೇಳಿಕೊಂಡಿದ್ದ. ಜೊತೆಗೆ ಹಣ ವರ್ಗಾಯಿಸಲು ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡು ಹಣ ಪಡೆಯಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೆಂಕಟೇಶ್ವರ ಇದೇ ರೀತಿ ಯಾರಿಗೆ ವಂಚನೆ ಮಾಡಿದ್ದಾನೆ. ಎಷ್ಟು ಜನರಿಂದ ಹಣ ಪಡೆದಿದ್ದಾರೆ ಎನ್ನುವ ವಿಚಾರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.