ಹೈದರಾಬಾದ್: ತನ್ನ ತಂದೆಯ ಬಳಿ ಕ್ಷಮೆಯಾಚಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.
ಈ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಮಂಗುರ್ಲಾ ಗ್ರಾಮದಲ್ಲಿ ಗುರುವಾರ ನಡೆದಿದೆ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಡೆತ್ ನೋಟ್ ಬರೆದಿದ್ದಾನೆ.
ಆತ್ಮಹತ್ಯೆ ಯಾಕೆ?: ಪರೀಕ್ಷೆಯು ಬೆಳಗ್ಗೆ 9 ರಿಂದ ಆರಂಭವಾಗಿ ಮಧ್ಯಾಹ್ನ 12 ರವರೆಗೆ ನಡೆಯುತ್ತದೆ. ಆದರೆ 17 ವರ್ಷದ ವಿದ್ಯಾರ್ಥಿ ಬೆಳಗ್ಗೆ 9.15 ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ ಎಂದು ವರದಿಯಾಗಿದೆ. ಹೀಗಾಗಿ ಆತನಿಗೆ ಶಿಕ್ಷಕರು ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಕಾಲುವೆಗೆ ಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಮಿಸ್ ಇಂಡಿಯಾ ತಾರೆ 28ನೇ ವಯಸ್ಸಿಗೆ ಸಾವು!
ಡೆತ್‌ನೋಟ್‌ನಲ್ಲೇನಿತ್ತು..?: ಪರೀಕ್ಷಾ ಕೇಂದ್ರ ತಡವಾಗಿ ತಲುಪಿದ್ದೇನೆ. ಹೀಗಾಗಿ ನನಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ವಿದ್ಯಾರ್ಥಿ ತನ್ನ ತಂದೆಗೆ ಪತ್ರ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ವಿಚಾರಕ್ಕೆ ಜೆಎನ್‌ಯು ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ
ವಿದ್ಯಾರ್ಥಿಗಳು ಒಂದು ನಿಮಿಷ ತಡವಾದರೂ ಪರೀಕ್ಷೆಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಇಂಟರ್ ಮೀಡಿಯೇಟ್ ಬೋರ್ಡ್ ಜಾರಿಗೊಳಿಸಿದೆ. ವಿದ್ಯಾರ್ಥಿ ತಡವಾಗಿ ಬಂದಿದ್ದರಿಂದ ಪರೀಕ್ಷೆಗೆ ಹಾಜರಾಗಲು ಆತನಿಗೆ ಅನುಮತಿ ನೀಡರಲಿಲ್ಲ. ಹೀಗಾಗಿ ಆತ ಬೆಳಗ್ಗೆ 9.30 ರ ಸುಮಾರಿಗೆ ತನ್ನ ಗ್ರಾಮಕ್ಕೆ ತೆರಳಿದ್ದಾನೆ. ನಂತರ ಅಲ್ಲಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಿಂದ ವಿದ್ಯಾರ್ಥಿ ವಾಚ್ ಮತ್ತು ವಾಲೆಟ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.