ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಎಸಗಿದ್ದಕ್ಕೆ ಗುಂಡೇಟು – ಕನ್ನಡದಲ್ಲಿ ವಿವರಿಸಿದ ಸಜ್ಜನರ್

Public TV
4 Min Read
DISHA CASE VISHAWANTH SAJJANAR

– ಎನ್‍ಕೌಂಟರ್ ನಡೆಸಿಲ್ಲ, ಗುಂಡಿನ ಚಕಮಕಿಯಲ್ಲಿ ಸಾವು
– ಆರೋಪಿಗಳಿಗೆ ಆಯುಧ ಬಳಕೆ ಗೊತ್ತಿತ್ತು
– 4 ಭಾಷೆಯಲ್ಲಿ ವಿವರ ನೀಡಿದ ಸಜ್ಜನರ್

ಹೈದರಾಬಾದ್: ನಾವು ಎನ್‍ಕೌಂಟರ್ ನಡೆಸಿದಲ್ಲ. ಪಿಸ್ತೂಲ್ ಕಸಿದುಕೊಂಡು ನಮ್ಮ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಆತ್ಮರಕ್ಷಣೆಗಾಗಿ ನಾವು ಆರೋಪಿಗಳ ಮೇಲೆ ಶೂಟೌಟ್ ಮಾಡಿದ್ದೇವೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ತಿಳಿಸಿದ್ದಾರೆ.

ಪಶುವೈದ್ಯೆ ದಿಶಾ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪೊಲೀಸ್ ಶೂಟೌಟ್ ಬಗ್ಗೆ ವಿಶ್ವನಾಥ್ ಸಜ್ಜನರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

disha case hyderabad 1

ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ:
ದಿಶಾ ಅವರನ್ನು ನ.26 ರಂದು ಅಪಹರಣ ಮಾಡಿ ಬಳಿಕ ಲೈಂಗಿಕ ದಾಳಿ ನಡೆಸಿ ಬಳಿಕ ಕೊಲೆ ಮಾಡಿ ಸೇತುವೆ ಕೆಳಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಯಾವುದೇ ಸಾಕ್ಷಿ ಇಲ್ಲದೇ ಆರಂಭವಾದ ತನಿಖೆಯಲ್ಲಿ ದೊರೆತ ಸಾಕ್ಷಿಗಳ ಆಧಾರವಾಗಿ ನಾಲ್ವರನ್ನು ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಮೂರ್ತಿಗಳ ಎದುರು ಹಾಜರು ಪಡಿಸಿ ಬಂಧಿತ ಮೊಹಮದ್ ಆರಿಫ್, ಚನ್ನಕೇಶವಲು, ಜೊಲ್ಲು ನವಿನ್, ಜೊಲ್ಲು ಶಿವನನ್ನು ಚರ್ಲಪಾಲ್ಲಿ ಜೈಲಿನಲ್ಲಿ ಅವರನ್ನು ಇಡಲಾಗಿತ್ತು. ಪೊಲೀಸರ ಮನವಿಯಂತೆ ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಡಿ.4 ಮತ್ತು 5 ರಂದು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ ಪ್ರಕರಣ ಬಗ್ಗೆ ಆರೋಪಿಗಳಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿತ್ತು. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

ಕಸ್ಟಡಿಯಲ್ಲಿ ಇದ್ದ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿ ಅನ್ವಯ ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸಲು ಹಾಗೂ ದಿಶಾರ ಮೊಬೈಲ್ ಫೋನ್, ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಇದರಂತೆ ಬೆಳಗ್ಗೆ ಅವರನ್ನು ಸ್ಥಳ ಪರಿಶೀಲನೆಗೆ ಕರೆತಂದ ವೇಳೆ ಅವರು ಸರಿಯಾದ ಮಾಹಿತಿ ನೀಡದೆ ಸಮಯ ವ್ಯರ್ಥ ಮಾಡಿ ಅಲ್ಲಿದೆ, ಇಲ್ಲಿದೆ ಎಂದು ಹೇಳುತ್ತಿದ್ದರು. ಆ ಬಳಿಕ ಸ್ಥಳದಲ್ಲಿ ದೊರೆತ ಕಲ್ಲು, ದೊಣ್ಣೆಗಳನ್ನು ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸರಿಂದ 2 ಪಿಸ್ತೂಲ್ ಕಿತ್ತುಕೊಂಡು ದಾಳಿ ನಡೆಸಿದ್ದರು.

priyanka reddy case accused 1

ಪ್ರಕರಣ ಎ1 ಮತ್ತು ಎ2 ಆರೋಪಿಗಳಾದ ಆರಿಫ್, ಚನ್ನಕೇಶವಲು ಪೊಲೀಸರ ಮೇಲೆ ಫೈರ್ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಅವರು ಶೂಟ್ ಮಾಡಿದ ಕಾರಣ ಎಚ್ಚರಿಕೆ ನೀಡಿ ಪೊಲೀಸರು ಅನಿವಾರ್ಯವಾಗಿ ಪ್ರತಿದಾಳಿ ನಡೆಸಿದ್ದರು. ಸ್ವಲ್ಪ ಸಮಯದ ಬಳಿಕ ದಾಳಿ ನಿಂತ ಕಾರಣ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನಾಲ್ವರು ಸಾವನ್ನಪ್ಪಿದ್ದು ಖಚಿತವಾಗಿತ್ತು. ಆರೋಪಿಗಳ ಮೇಲೆ ಹಲವು ಅಪರಾಧ ಪ್ರಕರಣಗಳಿದ್ದು, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲದೇ ಈ ಹಿಂದೆ ಯಾವ ಯಾವ ಸ್ಥಳಗಳಲ್ಲಿ ಮಹಿಳೆಯರ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಿದ್ದೇವೆ. ಇದನ್ನೂ ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ

ಘಟನೆ ಬಗ್ಗೆ ಕೇಳಿ ಬಂದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಕಾನೂನು ತನ್ನ ಕೆಲಸವನ್ನು ಮಾಡಿದೆ ಅಷ್ಟೇ ಎಂದರು. ಅವರಿಗೆ ಯಾವುದೇ ಹ್ಯಾಂಡ್ ಕಪ್ ಹಾಕಿರಲಿಲ್ಲ. ಅಲ್ಲದೇ ಅವರು ಶಸ್ತ್ರಾಸ್ತಗಳನ್ನು ಬಳಕೆ ಮಾಡುವ ವಿಧಾನ ತಿಳಿದಿದ್ದರು. ಇದುವೇ ಅವರು ಬಹುಬೇಗ ಪೊಲೀಸರ ಮೇಲೆ ದಾಳಿ ನಡೆಸಲು ಕಾರಣವಾಯಿತು. ಅವರನ್ನು ನಾವು ಘಟನೆ ನಡೆದ ಸ್ಥಳಕ್ಕೆ ದಿಶಾರ ಮೊಬೈಲ್ ಹಾಗೂ ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಕರೆತಂದಿದ್ದೆವು. ಆದರೆ ಪ್ರಕರಣ ಮರುಸೃಷ್ಟಿಗೆ ಕರೆತಂದಿರಲಿಲ್ಲ. ಬೆಳಗ್ಗೆ 5.30 ರಿಂದ 6.15ರ ವೇಳೆಗೆ ಘಟನೆ ನಡೆದಿದೆ ಎಂದರು.

priyanka reddy case accused

ಪ್ರಕರಣದಲ್ಲಿ ಪೊಲೀಸ್ ಎಸ್‍ಐ ಸೇರಿದಂತೆ ಮತ್ತೊಬ್ಬ ಅಧಿಕಾರಿಯ ತಲೆಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಶಿಫ್ಟ್ ಮಾಡಲಾಗಿದೆ ಎಂದರು. ಅಲ್ಲದೇ ಪೊಲೀಸರಿಗೆ ಯಾವುದೇ ಬುಲೆಟ್ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ

ಇದೇ ವೇಳೆ ದಿಶಾ ಕುಟುಂಬಕ್ಕೆ ಹೆಚ್ಚಿನ ಸಮಸ್ಯೆ ನೀಡದಂತೆ ಮನವಿ ಮಾಡಿದ ವಿಶ್ವನಾಥ್ ಅವರು, ಅವರ ಖಾಸಗಿ ಜೀವನವನ್ನು ಗೌರವಿಸಿ ಎಂದರು. ಅಲ್ಲದೇ ಪೊಲೀಸರ ತನಿಖೆಯನ್ನು ನಡೆಸಲು ಸಹಕಾರ ನೀಡಿ. ಪ್ರಕರಣ ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ. ಆಡೋಪಿಗಳಿಗೆ ಎಷ್ಟು ಬುಲೆಟ್ ತಾಗಿದೆ ಎಂಬ ಬಗ್ಗೆಯೂ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಲಭ್ಯವಾಗಲಿದೆ. ಇಲ್ಲಿವರೆಗೂ ನಡೆದ ಬೆಳವಣಿಗೆಗಳನ್ನು ನಾವು ಮುಂದಿಟ್ಟಿದ್ದೇವೆ ಎಂದರು.

4 ಭಾಷೆಯಲ್ಲಿ ಮಾಹಿತಿ:
ವಿಶ್ವನಾಥ್ ಸಜ್ಜನರ್ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ ಮೊದಲು ತೆಲುಗಿನಲ್ಲಿ ವಿವರಣೆ ನೀಡಿದರು. ಬಳಿಕ ಇಂಗ್ಲಿಷ್, ಹಿಂದಿಯಲ್ಲಿ ನೀಡಿ ಕೊನೆಗೆ ಕನ್ನಡದಲ್ಲೂ ಘಟನೆಯನ್ನು ವಿವರಿಸಿ ಕನ್ನಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

Share This Article
Leave a Comment

Leave a Reply

Your email address will not be published. Required fields are marked *