Connect with us

Corona

ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ

Published

on

– ಪೊಲೀಸರ ಸಹಕಾರದಿಂದ ತಾಯಿಯನ್ನು ಸೇರಿದ ಮಗ

ಹೈದರಾಬಾದ್: ಲಾಕ್‍ಡೌನ್ ಮಧ್ಯೆ ಮನೆಗೆ ಬರಲಾಗದೇ ಪರದಾಡುತ್ತಿದ್ದ ಮಗನಿಗಾಗಿ ತೆಲಂಗಾಣದಲ್ಲಿ ತಾಯಿ ಒಬ್ಬರೇ ಸ್ಕೂಟಿಯಲ್ಲಿ ಬರೋಬ್ಬರಿ 1,400 ಕಿಮೀ ಪ್ರಯಾಣಿಸಿ ಆತನನ್ನು ಕರೆತಂದಿದ್ದಾರೆ. ಈ ಮೂಲಕ ತಾಯಿ ಮಕ್ಕಳಿಗಾಗಿ ಯಾವುದೇ ಸಂಕಷ್ಟವನ್ನು ಎದುರಿಸಲು ಅಂಜಲ್ಲ ಎನ್ನೋದಕ್ಕೆ ಉದಾಹರಣೆ ಆಗಿದ್ದಾರೆ.

ತೆಲಂಗಾಣದ ನಿಜಾಮಾಬಾದ್‍ನಲ್ಲಿರುವ ಬೋಧಾನ್ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿ ಆಗಿ ಕಾರ್ಯನಿರ್ವಹಿಸುತ್ತಿರುವ ರಜಿಯಾ ಬೇಗಮ್ ಮಗನಿಗಾಗಿ ಸಾವಿರಾರು ಕಿ.ಮೀ ಪ್ರಯಾಣಿಸಿದ್ದಾರೆ. ಮಗ ಮೊಹ್ಮದ್ ನಿಜಾಮುದ್ದೀನ್(19) ಹೈದರಾಬಾದಿನ ನಾರಾಯಣ ವೈದ್ಯಕೀಯ ಅಕಾಡೆಮಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾರ್ಚ್ 12ರಂದು ಸ್ನೇಹಿತನ ತಂದೆಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆತನ ಜೊತೆ ಮೊಹ್ಮದ್ ಆಂಧ್ರ ಪ್ರದೇಶದ ನೆಲ್ಲೂರಿಗೆ ತೆರೆಳಿದ್ದನು. ಬಳಿಕ ಅಲ್ಲಿಂದ ಬೋಧಾನ್‍ಗೆ ವಾಪಸ್ ಬರಲು ರೈಲ್ವೆ ಟಿಕೆಟ್ ಕೂಡ ಮಾರ್ಚ್ 23ರಂದು ಬುಕ್ ಮಾಡಿದ್ದನು. ಆದರೆ ಇದೇ ವೇಳೆ ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ಮೊಹ್ಮದ್ ಬುಕ್ ಮಾಡಿದ್ದ ರೈಲ್ವೆ ಟಿಕೆಟ್ ಕೂಡ ರದ್ದು ಮಾಡಲಾಗಿತ್ತು. ಅಲ್ಲದೇ ಮನೆಗೆ ಹೋಗಲು ಆತನಿಗೆ ಯಾವುದೇ ವಾಹನವೂ ಸಿಗುತ್ತಿರಲಿಲ್ಲ. ಹೀಗಾಗಿ ಸ್ನೇಹಿತನ ಮನೆಯಲ್ಲಿಯೇ ಉಳಿದಿದ್ದನು.

ಪ್ರತಿದಿನ ತಾಯಿ ಬಳಿ ಫೋನ್‍ನಲ್ಲಿಯೇ ಮೊಹ್ಮದ್ ಮಾತನಾಡುತ್ತಿದ್ದನು. ನನಗೆ ಮನೆಗೆ ಬರಬೇಕು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದನು. ಇತ್ತ ರಜಿಯಾ ಅವರಿಗೂ ಮಗನ ಚಿಂತೆ ಶುರುವಾಗಿತ್ತು. ಹೀಗಾಗಿ ಬೋಧಾನ್ ಎಸಿಪಿ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿ ಮಗನನ್ನು ಕರೆತರಲು ಅನುಮತಿ ಪತ್ರವನ್ನು ಪಡೆದುಕೊಂಡು ಬಂದಿದ್ದರು. ಬಳಿಕ ಸೋಮವಾರ ಮನೆಮಂದಿಗೆ ಯಾರಿಗೂ ತಿಳಿಸದೆ ಬೆಳಗ್ಗೆ ಸ್ಕೂಟಿಯಲ್ಲಿ ರಜಿಯಾ ಮನೆಬಿಟ್ಟರು. ಬಳಿಕ ಹೈದರಾಬಾದ್ ತಲುಪಿದ ನಂತರ ಮಗನಿಗೆ ಕರೆಮಾಡಿ ನಾನು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇನೆ ಎಂದು ತಿಳಿಸಿದ್ದರು.

ಬೋಧಾನ್‍ನಿಂದ ನೆಲ್ಲೂರಿಗೆ ಸುಮಾರು 700 ಕಿಮೀ ಅಂತರವಿದೆ. ಈ ದೂರವನ್ನು ರಜಿಯಾ ಸ್ಕೂಟಿಯಲ್ಲಿಯೇ ಒಬ್ಬರೇ ಕ್ರಮಿಸಿದ್ದಾರೆ. ಹಾಗೆಯೇ ಚೆಕ್‍ಪೋಸ್ಟ್ ಗಳಲ್ಲಿ ಪೊಲೀಸರು ತಡೆದಾಗ ಎಸಿಪಿ ಕೊಟ್ಟ ಪತ್ರವನ್ನು ತೋರಿಸಿ ಮುಂದೆ ಸಾಗುತ್ತಿದ್ದರು. ಮನೆಯಿಂದಲೇ ಊಟ, ತಿಂಡಿಯನ್ನೂ ರಜಿಯಾ ಕಟ್ಟಿಕೊಂಡು ಬಂದಿದ್ದರು. ಹಾಗೆಯೇ ಸ್ಕೂಟಿಗೆ ಪೆಟ್ರೋಲ್‍ಗಾಗಿ 5 ಲೀಟರ್ ಕ್ಯಾನ್‍ನನ್ನು ಇಟ್ಟುಕೊಂಡಿದ್ದರು. ಮಾರ್ಗ ಮಧ್ಯೆ ಸಿಗುತ್ತಿದ್ದ ಪೆಟ್ರೋಲ್ ಬಂಕ್‍ಗಳಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು, 15ರಿಂದ 20 ನಿಮಿಷ ಬ್ರೇಕ್ ಪಡೆದು ಊಟ-ತಿಂಡಿ ಮಾಡಿಕೊಂಡು ಮತ್ತೆ ಮುಂದೆ ಸಾಗುತ್ತಿದ್ದರು.

ಹೀಗೆ ಸ್ಕೂಟಿಯಲ್ಲಿಯೇ ಪ್ರಯಾಣಿಸಿ ಮಂಗಳವಾರ ಮಧ್ಯಾಹ್ನ ನೆಲ್ಲೂರು ತಲುಪಿದರು. ಆ ಬಳಿಕ ಅಲ್ಲಿ ಮಗನನ್ನು ಕರೆದುಕೊಂಡು ಮಂಗಳವಾರ ಸಂಜೆಯೇ ನೆಲ್ಲೂರು ಬಿಟ್ಟು ಬೋಧಾನ್ ಕಡೆ ಪ್ರಯಾಣ ಬೆಳೆಸಿದರು. ಕೊನೆಗೆ ಬುಧವಾರ ಸಂಜೆ ಬೋಧಾನ್ ಬಂದು ತಲುಪಿದ್ದರು.

ತಾಯಿಯ ಬಗ್ಗೆ ಮಗ ಮೊಹ್ಮದ್ ಮಾತನಾಡಿ, ನನ್ನ ಅಮ್ಮ ನನಗಾಗಿ 23ರಿಂದ 24 ಗಂಟೆ ಸುಮಾರು 700 ಕಿ.ಮೀ ಒಬ್ಬರೇ ಸ್ಕೂಟಿಯಲ್ಲಿ ಬಂದಿದ್ದಾರೆ. ಲಾಕ್‍ಡೌನ್ ಮಧ್ಯೆಯೂ ನನಗಾಗಿ ಪೊಲೀಸರ ಅನುಮತಿ ಪಡೆದು ಇಷ್ಟು ದೂರ ಬಂದಿದ್ದಾರೆ. ಎರಡು ದಿನ ನನಗಾಗಿ ಅಮ್ಮ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದ್ದಾನೆ.

ಇತ್ತ ರಜಿಯಾ ಅವರು ಪ್ರತಿಕ್ರಿಯಿಸಿ, ನನಗೆ ನನ್ನ ಮಗನ ಸುರಕ್ಷತೆ ಮುಖ್ಯವಾಗಿತ್ತು. ಆತ ಸ್ನೇಹಿತನ ಮನೆಯಲ್ಲಿ ಸುರಕ್ಷಿತವಾಗಿದ್ದನು. ಆದರೆ ನನಗೆ ಮನಸ್ಸು ತಡೆಯಲಿಲ್ಲ. ಆದ್ದರಿಂದ ಸ್ಕೂಟಿ ಹತ್ತಿ ಆತನನ್ನು ಕರೆತರಲು ಹೊರಟುಬಿಟ್ಟೆ. ನಾನು ಸುಮಾರು 25 ವರ್ಷದಿಂದ ಸ್ಕೂಟಿ ಚಲಾಯಿಸುತ್ತಿದ್ದೇನೆ. 14 ವರ್ಷಗಳ ಹಿಂದೆಯೇ ನನ್ನ ಪತಿ ತೀರಿಕೊಂಡರು. ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತುಂಬಾ ದೂರದ ಪ್ರಯಾಣ ಸ್ಕೂಟಿಯಲ್ಲಿಯೇ ಮಾಡಿದ್ದೇನೆ. ಹೀಗಾಗಿ ನೆಲ್ಲೂರು ತಲುಪುವುದು ನನಗೆ ಕಷ್ಟ ಅನಿಸಲಿಲ್ಲ. ಅದರಲ್ಲೂ ಪೊಲೀಸರು ಸಹಕಾರದಿಂದ ನಾನು ಇಂದು ನನ್ನ ಮಗನನ್ನು ಮನೆಗೆ ಕರೆತಂದಿದ್ದೇನೆ, ಪೊಲೀಸರಿಗೆ ಧನ್ಯವಾದ ಎಂದು ತಾಯಿ ತಿಳಿಸಿದ್ದಾರೆ.

ರಜಿಯಾ ಅವರ ಬಗ್ಗೆ ಬೋಧಾನ್ ಎಸಿಪಿ ಅವರು ಮಾತನಾಡಿ, ಅವರು ತುಂಬಾ ಧೈರ್ಯಶಾಲಿ ಮಹಿಳೆ. ಮೊದಲು ಅವರು ನನ್ನ ಬಳಿ ಮಗನನ್ನು ಕರೆದುಕೊಂಡು ಬರಲು ಅನುಮತಿ ಕೇಳಿದಾಗ ಕಾರ್ ನಲ್ಲಿ ಮಗನನ್ನು ಕರೆದುಕೊಂಡು ಬನ್ನಿ ಎಂದು ಸಲಹೆ ನೀಡಿದ್ದೆ. ಆಗ ಅವರು ನನ್ನ ಬಳಿ ಅಷ್ಟು ಹಣವಿಲ್ಲ, ನಾನು ಸ್ಕೂಟಿಯಲ್ಲಿಯೇ ಮಗನನ್ನು ಕರೆತರುತ್ತೇನೆ ದಯವಿಟ್ಟು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು. ಅಲ್ಲದೇ ರಾತ್ರಿ ವೇಳೆ ಕೂಡ ನಿರ್ಜನ ರಸ್ತೆ ಮಾರ್ಗದಲ್ಲಿ, ಅರಣ್ಯ ಮಾರ್ಗದಲ್ಲಿ ಧೈರ್ಯಗೆಡದೆ ಪ್ರಯಾಣಿಸಿದ್ದಾರೆ. ಚೆಕ್‍ಪೋಸ್ಟ್ ಬಳಿ ಪೊಲೀಸರು ಹೀಗೆ ಒಬ್ಬರೇ ಹೋಗುವುದು ಸುರಕ್ಷಿತವಲ್ಲ ಎಂದು ಹೇಳಿದರೂ ಅವರು ಮಗನಿಗಾಗಿ ನಾನು ಹೋಗಲೇಬೇಕು ಎಂದು ಮನವಿ ಮಾಡಿಕೊಂಡು ಹೋಗಿದ್ದಾರೆ. ಈ ತಾಯಿಯ ಧೈರ್ಯ, ಪ್ರೀತಿ ನಿಜಕ್ಕೂ ಮೆಚ್ಚಲೇಬೇಕು ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *