ಹೈದರಾಬಾದ್: ಹಳ್ಳಿಯಲ್ಲಿ ಮದುವೆ ಆಯೋಜಿಸಲಾಗಿದೆ ಎನ್ನುವ ವಿಚಾರಕ್ಕೆ ಮುಹೂರ್ತದ ದಿನವೇ ವಧು ಮತ್ತು ವರನ ಕುಟುಂಬದವರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ತೆಲಂಗಾಣದ ಸರ್ಯಪೇಟೆಯಲ್ಲಿ ನಡೆದಿದೆ.
ಮದುವೆ ಮನೆಯಲ್ಲೇ ವಧು ಮತ್ತು ವರನ ಕಡೆಯವರು ಬಡಿದಾಡಿಕೊಂಡಿದ್ದು, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಕೊಡಾಡ್ ಗ್ರಾಮೀಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಮ್ ರೆಡ್ಡಿ, ಅಕ್ಟೋಬರ್ ನಲ್ಲಿ ಸೂರ್ಯಪೇಟೆ ಜಿಲ್ಲೆಯ ಕೊಡಾಡ್ ಮಂಡಲದ ಅಜಯ್ ಮತ್ತು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜ ನಡುವೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಅದರಂತೆ ಮದುವೆ ಮಾಡಲು ಅಕ್ಟೋಬರ್ 29 ರಂದು ಮದುವೆ ನಿಶ್ಚಯ ಮಾಡಲಾಗಿತ್ತು.
ವಿವಾಹದ ಸಂಭ್ರಮಾಚರಣೆಯ ಸಮಯದಲ್ಲಿ, ಗ್ರಾಮದಲ್ಲಿ ಮದುವೆ ಮಾಡುತ್ತಿರುವ ವಿಚಾರದ ಬಗ್ಗೆ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವಾದವು ಜಗಳವಾಗಿ ಮಾರ್ಪಟ್ಟು, ಎರಡೂ ಕುಟುಂಬದ ಸದಸ್ಯರು ಸಮಾರಂಭಕ್ಕೆ ಹಾಕಿಸಿದ್ದ ಕುರ್ಚಿಗಳಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಶಿವರಾಮ್ ರೆಡ್ಡಿ ಹೇಳಿದ್ದಾರೆ.
ಈ ವಿಚಾರ ತಿಳಿದ ನಂತರ ನಾವು ತಕ್ಷಣ ಅಲ್ಲಿಗೆ ಹೋದೆವು. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸಿ ಠಾಣೆಗೆ ಬಂದು ದೂರು ನೀಡಿ ಎಂದು ಹೇಳಿದ್ದವು. ಆದರೆ ಮರು ದಿನ ಠಾಣೆಗೆ ಬಂದ ಅವರು ಈ ಜಗಳದ ವಿಚಾರವಾಗಿ ವಧು ವರರಿಗು ಯಾವುದೇ ಸಮಸ್ಯೆ ಇಲ್ಲ. ಅವರು ನಾವು ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ದೂರು ನೀಡುವುದಿಲ್ಲ. ನಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.