ಹೈದರಾಬಾದ್: ತನ್ನ ಪ್ರೀತಿಯನ್ನು ನಿರಾಕರಸಿದಕ್ಕೆ ಕೋಪಗೊಂಡ ಯುವಕನೋರ್ವ ಪ್ರಿಯತಮೆಯ ಕತ್ತು ಸೀಳಿ ಕೊಲೆಗೈದು, ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ಆಘಾತಕಾರಿ ಘಟನೆಯೊಂದು ನಡೆದಿದೆ.
ಶನಿವಾರ ತೆಲಂಗಾಣ ರಾಜ್ಯದ ಭದ್ರಾದಿ ಕೊಥೆಗುಡೆಮ್ ಜಿಲ್ಲೆಯಲ್ಲಿ ಶಾಲಾ ಆವರಣದಲ್ಲಿ ಈ ಘಟನೆ ನಡೆದಿದೆ. 26 ವರ್ಷದ ವಿ. ಶ್ರೀನಿವಾಸ್ ರಾವ್ ಎಂಬಾತನೇ ಪ್ರಿಯತಮೆ 24 ವರ್ಷದ ಪ್ರವಲಿಕಾ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ.
ಪ್ರವಲಿಕಾ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಯಾಗಿದ್ದು, ಭದ್ರಾದಿ ಕೊಥೆಗುಡೆಮ್ ನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಪ್ರತಿದಿನ ಪ್ರವಲಿಕಾಳಿಗೆ ತನ್ನನ್ನು ಮದುವೆ ಆಗಬೇಕೆಂದು ಕಿರುಕುಳ ನೀಡುತ್ತಿದ್ದನು. ಆದ್ರೆ ಪ್ರವಲಿಕಾ ಮಾತ್ರ ಶ್ರೀನಿವಾಸ ಪ್ರೀತಿಯನ್ನು ನಿರಾಕರಿಸಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ಪ್ರವಲಿಕಾಗೆ ಪೋಷಕರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ವಿಷಯ ತಿಳಿದು ರೊಚ್ಚಿಗೆದ್ದ ಶ್ರೀನಿವಾಸ್ ಹಾಡಹಗಲೇ ಶಾಲಾ ಆವರಣದಲ್ಲೇ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನು ತಂದಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.
ಘಟನೆಯ ಬಳಿಕ ಪ್ರತ್ಯಕ್ಷದರ್ಶಿಗಳು ಶ್ರೀನಿವಾಸ್ ಬಹಳ ದಿನಗಳಿಂದ ಪ್ರವಲಿಕಾಗೆ ಹಿಂಬಾಲಿಸುವ ಮೂಲಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿಸಿದ್ದಾರೆ.