– ಮೂವರು ಮಕ್ಕಳಿದ್ದಾರೆ ಸಾಕಲು ಆಗಲ್ಲ ಎಂದ
– ಮಲಗಿದ್ದ ಮಗಳನ್ನು ಕೊಲೆಗೈದು ಜೈಲು ಸೇರಿದ
ಹೈದರಾಬಾದ್: ಬಡತನವಿದೆ ಮಕ್ಕಳನ್ನು ಸಾಕಲು ಆಗುತ್ತಿಲ್ಲ ಎಂದು ರೈತನೋರ್ವ ತನ್ನ 4 ವರ್ಷದ ಮಗಳನ್ನು ಕತ್ತು ಸೀಳಿ ಕೊಲೆಗೈದ ಅಮಾನುಷ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗೊಂಗುಲೂರು ಬುಡಕಟ್ಟು ಕುಗ್ರಾಮದಲ್ಲಿ ನಡೆದಿದೆ.
ಗೊಂಗುಲೂರು ನಿವಾಸಿ ರೈತ ಜೀವ ತನ್ನ 4 ವರ್ಷದ ಮಗಳನ್ನು ಗುರುವಾರ ಕೊಲೆ ಮಾಡಿದ್ದಾನೆ. ಆದರೆ ಈ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಮೊದಲೇ ಬಡತನ ಮೇಲಿಂದ ಸಾಲದ ಹೊರೆ ಹೊತ್ತುಕೊಂಡು ರೈತ ಜೀವ ಕಷ್ಟದಲ್ಲಿ ಸಂಸಾರ ನಡೆಸುತ್ತಿದ್ದನು. ಅಲ್ಲದೇ ದೇಶಾದ್ಯಂತ ಕೊರೊನಾ ಲಾಕ್‍ಡೌನ್ ಜಾರಿಯಾದ ಮೇಲೆ ರೈತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದನು. ಈತನಿಗೆ ಒಂದು ಗಂಡು ಮಗು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಹೀಗಾಗಿ ಈ ಸಂಕಷ್ಟದಲ್ಲಿ ಮಕ್ಕಳನ್ನು ಸಾಕಲು ಆಗುವುದಿಲ್ಲ ಎಂದು ಯೋಚಿಸಿದ ರೈತ ತನ್ನ ಒಬ್ಬಳು ಮಗಳನ್ನು ಕೊಲೆ ಮಾಡಲು ನಿರ್ಧರಿಸಿದನು.
ಗುರುವಾರ ರಾತ್ರಿ ಮನೆಮಂದಿಯೆಲ್ಲಾ ಮಲಗಿದ್ದ ಸಮಯದಲ್ಲಿ ತನ್ನ 4 ವರ್ಷದ ಮಗಳನ್ನು ಜೀವ ಎತ್ತುಕೊಂಡು ಹೋಗಿದ್ದಾನೆ. ಬಳಿಕ ತನ್ನ ಗುಡಿಸಲ ಬಳಿಯೇ ಚಾಕುವಿನಿಂದ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತನಗೆ ಏನು ಗೊತ್ತಿಲ್ಲದ ಹಾಗೆ ಮನೆ ಮಂದಿ ಬಳಿ ಬಂದು ಮಗಳು ಕಾಣುತ್ತಿಲ್ಲ ಎಂದು ಎಲ್ಲರನ್ನು ಎಬ್ಬಿಸಿದ್ದಾನೆ. ನಂತರ ಮನೆಯವರು ಬಾಲಕಿಯನ್ನು ಹುಡುಕಲು ಆರಂಭಿಸಿದಾಗ ಗುಡಿಸಲ ಬಳಿ ರಕ್ತದ ಮಡುವಿನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ.
ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಮನೆಮಂದಿಯನ್ನು ವಿಚಾರಣೆ ನಡೆಸಿದರು. ಈ ವೇಳೆ ಅನುಮಾನದ ಮೇರೆಗೆ ಜೀವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ಆತ ಬಾಯಿಬಿಟ್ಟಿದ್ದಾನೆ. ಸಾಲ ಮಾಡಿಕೊಂಡು ತಾನು ಕಷ್ಟದಲ್ಲಿದ್ದೆ. ಮೂವರು ಮಕ್ಕಳನ್ನು ಸಾಕಲು ಆಗುತ್ತಿರಲಿಲ್ಲ. ಹೀಗಾಗಿ ಬಡತನದಿಂದ ಬೇಸತ್ತು ಈ ಕೃತ್ಯವೆಸೆಗಿಬಿಟ್ಟೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.