ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದನ್ನು (Inter-Caste Marriage) ಮನೆಯವರು ವಿರೋಧಿಸಿದ್ದರಿಂದ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.
ಅನುಮೂಲ ರಾಕೇಶ್ ರೆಡ್ಡಿ (25), ತರಿಗೊಪ್ಪುಲ ಹರಿಕಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರಿಬ್ಬರು ಪ್ರೀತಿಸಿ, ಮದುವೆಯಾಗಿ ಹೈದರಾಬಾದ್ಗೆ ತೆರಳಿ ಮೂರು ತಿಂಗಳ ಹಿಂದೆ ಸಿದ್ದಿಪೇಟೆ ಜಿಲ್ಲೆಯ ತಮ್ಮ ಹಳ್ಳಿಗೆ ಮರಳಿದ್ದರು.
ರಾಕೇಶ್ ಪತ್ನಿ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಅವರ ಪೋಷಕರು ಮದುವೆಯನ್ನು ಒಪ್ಪಲಿಲ್ಲ. ಇದರಿಂದ ದಂಪತಿ ಮನನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಕೇಶ್ ರೆಡ್ಡಿ ಮಾರ್ಚ್ 28ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಮಾರ್ಚ್ 30ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಪತಿಯ ಸಾವಿನ ಬಗ್ಗೆ ತಿಳಿದ ಹರಿಕಾ ಏಪ್ರಿಲ್ 2ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಕಾ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ಸಲಹೆ ನೀಡಿದ ನಂತರ ರಾಕೇಶ್ ರೆಡ್ಡಿ ಅವರ ಪೋಷಕರು ಇಷ್ಟವಿಲ್ಲದೇ ಮದುವೆಗೆ ಒಪ್ಪಿಕೊಂಡಿದ್ದರು. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

