ಬೆಂಗಳೂರು: ಅಪ್ಪ ಅಧಿಕಾರದಲ್ಲಿರುವಾಗ್ಲೇ ನೀವು ರಾಜಕೀಯಕ್ಕೆ ಎಂಟ್ರಿ ಕೊಡಬೇಕು. ಅಪ್ಪ ದೊಡ್ಡ ಸ್ಥಾನದಲ್ಲಿದ್ದಾಗ ಮಕ್ಕಳು ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಸುಲಭ ಅಂತ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಪುತ್ರ ಕೆ. ತಾರಕರಾಮರಾವ್ ಅವರು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ರಾಜಕೀಯ ಸಲಹೆ ನೀಡಿದ್ದಾರೆ.
4 ದಿನಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಕೆಟಿಆರ್ ಅವರು ನಿಖಿಲ್ ಅವರನ್ನು ಭೇಟಿ ಮಾಡಿ ಸುಮಾರು 2 ಗಂಟೆ ಮಾತುಕತೆ ನಡೆಸಿದ್ದರು. ಈ ವೇಳೆ ನನ್ನನ್ನೇ ನೋಡಿ ನಮ್ಮ ಅಪ್ಪ ಸಿಎಂ ಆಗಿರುವಾಗ್ಲೇ ಗೆದ್ದು ಶಾಸಕನಾಗಿ ಮಂತ್ರಿ ಆಗಿದ್ದೇನೆ. ಆಂಧ್ರದಲ್ಲಿ ಸಿಎಂ ಚಂದ್ರಬಾಬುನಾಯ್ಡು ಮಗ ನಾರನ್ ಲೋಕೇಶ್ ಸಹ ಆಕ್ಟೀವ್ ಆಗಿದ್ದಾರೆ. ನೀವು ಹೀಗೆ ಸುಮ್ಮನಿದ್ರೆ ಹೇಗೆ..?. ಹೀಗಾಗಿ ಇದೇ ಒಳ್ಳೆ ಟೈಂ, ರಾಜಕಾರಣಕ್ಕೆ ಎಂಟ್ರಿ ಕೊಟ್ಟೇ ಬಿಡಿ ಅಂತ ಕಿವಿಮಾತು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಮ್ಮ ಅಪ್ಪ ಸಿಎಂ, ನಾನು ಅವರ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ನಿಮ್ಮ ತಂದೆ ಸಿಎಂ ಆಗಿದ್ದಾರೆ, ನೀವು ರಾಜಕಾರಣಕ್ಕೆ ಬರಲು ಯಾಕೆ ತಡ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಪ್ಪ ಕೆಸಿಆರ್ ಸರ್ಕಾರದಲ್ಲೇ ಕೆಟಿಆರ್ 5 ಖಾತೆಗಳನ್ನು ಹೊಂದಿರುವ ಕ್ಯಾಬಿನೆಟ್ ಸಚಿವರಾಗಿದ್ದಾರೆ.
ನನ್ನ ಕುಟುಂಬ, ಜನ ಬಯಸಿದ್ರೆ ನಾನು ರಾಜಕಾರಣಕ್ಕೆ ಬರುತ್ತೇನೆ. ನಾನು ರಾಜಕಾರಣಕ್ಕೆ ಬರುವುದಕ್ಕೆ ಅಜ್ಜ ದೇವೇಗೌಡರ ಅನುಮತಿ ಮುಖ್ಯ. ನಮ್ಮ ತಂದೆ-ತಾಯಿ ಒಪ್ಪಿದರೆ ರಾಜಕೀಯಕ್ಕೆ ಬರುತ್ತೇನೆ. ಅವಕಾಶ ಒದಗಿ ಬಂದರೆ ನಾನು ಖಂಡಿತ ನಿಮ್ಮ ಜೊತೆ ಕೈಜೋಡಿಸುತ್ತೇನೆ ಅಂತ ಮಾತುಕತೆ ವೇಳೆ ತೆಲಂಗಾಣ ಸಿಎಂ ಮಗನಿಗೆ ನಿಖಿಲ್ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ.