‘ಪುಷ್ಪ 2′ (Pushpa 2) ಕಾಲ್ತುಳಿತ ಪ್ರಕರಣವು ಹಲವು ರೋಚಕ ತಿರುವುಗಳನ್ನು ಪಡೆದ ಬಳಿಕ ರಾಜಿ ಸಂಧಾನಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು (Revanth Reddy) ಟಾಲಿವುಡ್ ಸ್ಟಾರ್ಸ್ ಭೇಟಿಯಾಗಿದ್ದಾರೆ. ಈ ಪ್ರಕರಣದ ಸಂಬಂಧ ಟಾಲಿವುಡ್‌ಗೆ ಸಿಎಂ ರೇವಂತ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಸಿಎಂ ರೇವಂತ್ ರೆಡ್ಡಿರನ್ನು ಭೇಟಿಯಾದ ಅಲ್ಲು ಅರ್ಜುನ್ ತಂದೆ
ಕಾಲ್ತುಳಿತ ಪ್ರಕರಣದ ಬಳಿಕ ಸರ್ಕಾರ ವರ್ಸಸ್ ಚಿತ್ರರಂಗ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆ ಸಂಧಾನಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ನಾಗಾರ್ಜುನ, ವೆಂಕಟೇಶ್ ಸೇರಿದಂತೆ ಅನೇಕರು ಸಿಎಂರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲು ಅರ್ಜುನ್ (Allu Arjun) ಅವರನ್ನು ಬಹಿರಂಗವಾಗಿಯೇ ಟೀಕಿಸಿದ್ದ ಸಿಎಂ ರೇವಂತ್ ರೆಡ್ಡಿ ಅವರು ತೆಲುಗಿನ ಕಲಾವಿದರಿಗೆ ಸಾಮಾಜಿಕ ಜವಾಬ್ದಾರಿಯ ಪಾಠ ಮಾಡಿದ್ದರು.
ಇನ್ನು ಮಾತುಕತೆ ವೇಳೆ, ನಟನ ವರ್ತನೆ ಬಗ್ಗೆ ಸಿಎಂ ರೇವಂತ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸೆಲೆಬ್ರಿಟಿಗಳು ಹೊಂದಿರಬೇಕು ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಚಿತ್ರರಂಗದ ಬಗ್ಗೆ ನಮಗೆ ತಕರಾರುಗಳಿಲ್ಲ. ತೆಲುಗು ಚಿತ್ರ ನಿರ್ಮಾಪಕರು ಮತ್ತು ನಟರ ಜೊತೆ ಸರ್ಕಾರ ನಿಂತಿದೆ ಎಂದು ಅವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ, ತೆಲುಗು ಚಿತ್ರರಂಗದ ವರ್ತನೆಗೂ ಸಿಎಂ ರೇವಂತ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಅವರ ಮನೆಗೆ ಇಡೀ ಚಿತ್ರರಂಗ ಸಾಲುಗಟ್ಟಿ ನಿಂತಿದ್ದೀರಿ. ಆದರೆ ಆಸ್ಪತ್ರೆಯಲ್ಲಿರುವ ತೀವ್ರ ಅಸ್ವಸ್ಥವಾಗಿದ್ದ ಮೃತ ರೇವತಿ ಪುತ್ರ ಶ್ರೀತೇಜ ಬಗ್ಗೆ ಯಾರು ಯೋಚಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರರಂಗ ಕನಿಷ್ಠ ಪ್ರಮಾಣದ ಸಮಾಜಿಕ ಜವಾಬ್ದಾರಿಯನ್ನು ತೋರಿಸಬೇಕು. ಅಂತಿಮವಾಗಿ ಸಿಎಂ ಜೊತೆಗೆ ಮಾತುಕತೆ ನಡೆಸುವ ಮೂಲಕ ಸರ್ಕಾರ ಮತ್ತು ಚಿತ್ರರಂಗದ ನಡುವೆ ಮೂಡಿರುವ ಕಾರ್ಮೋಡವನ್ನು ತಿಳಿಗೊಳಿಸುವ ಪ್ರಯತ್ನ ನಡೆದಿದೆ. ಇದು ಫಲಕಾರಿಯಾಗಲಿದ್ಯಾ? ಅನ್ನೊದು ಮುಂದೆ ಕಾದು ನೋಡಬೇಕಿದೆ.
ಅಂದಹಾಗೆ, ಈ ಮಾತುಕತೆಯಲ್ಲಿ ಸಿಎಂ ರೇವಂತ್ ರೆಡ್ಡಿ ಅವರನ್ನ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಭೇಟಿಯಾದರು. ಈ ನಿಯೋಗದಲ್ಲಿ ಅಲ್ಲು ಅರ್ಜುನ್ ತಂದೆ ಮತ್ತು ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ದಗ್ಗುಬಾಟಿ, ಸುನಿಲ್ ನಾರಂಗ್, ಸುಪ್ರಿಯಾ, ನಾಗ ವಂಶಿ, ‘ಪುಷ್ಪ 2’ ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಭಾಗಿಯಾಗಿದ್ದರು. ಇವರೊಂದಿಗೆ ನಟರಾದ ವೆಂಕಟೇಶ್ ದಗ್ಗುಬಾಟಿ, ನಿತಿನ್, ವರುಣ್ ತೇಜ್, ಸಿದ್ದು ಜೊನ್ನಲಗಡ್ಡ, ಕಿರಣ್ ಅಬ್ಬಾವರಂ ಮತ್ತು ಶಿವ ಬಾಲಾಜಿ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ಹರೀಶ್ ಶಂಕರ್, ಅನಿಲ್ ರವಿಪುಡಿ ಮತ್ತು ಬಾಬಿ ಸಾಥ್ ನೀಡಿದರು.