ಹೈದರಾಬಾದ್: ತೆಲುಗು ಪದ್ಯ ಕಲಿತುಕೊಂಡು ಬಂದಿಲ್ಲವೆಂದು ಶಾಲೆಯಲ್ಲಿ ಟೀಚರ್ ಹೊಡೆದಿದ್ದರಿಂದ ಮನನೊಂದ 9 ವರ್ಷದ ವಿದ್ಯಾರ್ಥಿಯೊಬ್ಬ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ವನಾಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಆನಂದ್ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯಾಗಿದ್ದು, ಈತ ಸ್ಥಳೀಯ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದನು.
Advertisement
ಏನಿದು ಘಟನೆ?: ಮೂರು ದಿನದ ಹಿಂದೆ ಟೀಚರ್ ವಿದ್ಯಾರ್ಥಿ ಆನಂದ್ ಬಳಿ ತೆಲುಗು ಪದ್ಯ ಕಲಿತುಕೊಂಡು ಬರುವಂತೆ ಸೂಚಿಸಿದ್ದರು. ಅಂತೆಯೇ ಗುರುವಾರ ಪದ್ಯ ಕಲಿತುಕೊಂಡು ಬಂದಿಯಾ ಅಂತ ಟೀಚರ್ ಕೇಳಿದಾಗ ಆನಂದ್ ಇಲ್ಲ ಎಂದು ಉತ್ತರಿಸಿದ್ದಾನೆ. ಮೂರು ದಿನ ಸಮಯ ಕೊಟ್ಟು ಬಳಿಕವೂ ಕಲಿತುಕೊಂಡು ಬಾರದ ಆನಂದ್ ಮೇಲೆ ಸಿಟ್ಟುಗೊಂಡ ಟೀಚರ್ ಚೆನ್ನಾಗಿ ಹೊಡೆದಿದ್ದಾರೆ. ಇದರಿಂದ ಮನನೊಂದು ಆನಂದ್, ಮನೆಗೆ ಬಂದು ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
Advertisement
ಕೂಡಲೇ ಇದನ್ನು ಗಮನಿಸಿದ ಪೋಷಕರು ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗನಿಗೆ ಶಾಲೆಯಲ್ಲಿ ಉಳಿದ ವಿದ್ಯಾರ್ಥಿಗಳ ಎದುರು ಟೀಚರ್ ಅವಮಾನ ಮಾಡಿದ್ದಾರೆ. ಹೀಗಾಗಿ ಆತ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಘಟನೆಯಿಂದ ಆನಂದ್ ದೇಹ ಶೇ.80 ರಷ್ಟು ಸುಟ್ಟು ಹೋಗಿದ್ದರಿಂದ ಜಿಲ್ಲೆಯ ಮೆಹಬುಬ್ ನಗರ್ ಆಸ್ಪತ್ರೆಯಿಂದ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಆನಂದ್ ತಂದೆ ನಾಗಣ್ಣ ತಿಳಿಸಿದ್ದಾರೆ.
Advertisement
ಘಟನೆಯ ಬಳಿಕ ಟೀಚರ್ ತಲೆಮರೆಸಿಕೊಂಡಿದ್ದು, ತಮ್ಮ ಮೊಬೈಲನ್ನು ಸ್ವಿಚ್ಚ್ ಆಫ್ ಮಾಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಸೋಮ್ನಾರಾಯಣ್ ಸಿಂಗ್ ತಿಳಿಸಿದ್ದಾರೆ.