CrimeLatestMain PostNational

ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

ಹೈದರಾಬಾದ್: ಮನೆಯಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬುಧವಾರ ನಡೆದಿದೆ.

ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ಘಟನೆ ಕುರಿತು ಮಾತನಾಡಿದ ನಿಜಾಮಾಬಾದ್‍ನ ಸಹಾಯಕ ಪೊಲೀಸ್ ಕಮಿಷನರ್ ಎ ವೆಂಕಟೇಶ್ವರಲು, ಸ್ಕೂಟರ್ ತಯಾರಕ ಮತ್ತು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಯಿನಾಥ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಲು ಇಟ್ಟುಕೊಂಡಿದ್ದರು. ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಲಿವಿಂಗ್ ರೂಮಿನಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಕೂಡ ಬೆಂಕಿಯನ್ನು ನಂದಿಸುವಾಗ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮಸ್ವಾಮಿ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Back to top button