ಬೆಂಗಳೂರು: ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯವರು ಬಾಯಿ ಬಿಟ್ಟರೆ ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ದಿ.ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದ ಸಂಸದ ಶ್ರೀರಾಮುಲು ಅವರ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಎಸ್.ಎಸ್.ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದು ನಾಲಗೆ ಹರಿಬಿಟ್ಟಿರುವ @BJP4Karnataka ನಾಯಕರೇ,
ದಿ.ಅನಂತಕುಮಾರ್ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ.
ಎಲ್ಲವನ್ನೂ ಸಹಿಸಿಕೊಂಡಿರುವ
ಧೈರ್ಯವಂತ ಹೆಣ್ಣುಮಗಳು ತೇಜಸ್ವಿನಿಯವರು ಬಾಯಿ ಬಿಟ್ಟರೆ ನಿಮ್ಮಬಣ್ಣ ಬಯಲಾಗಲಿದೆ.
— Siddaramaiah (@siddaramaiah) May 10, 2019
ಸಿ.ಎಸ್ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳವೇ ಕಾರಣ ಎಂದು ನಾಲಿಗೆ ಹರಿಬಿಟ್ಟಿರುವ ಬಿಜೆಪಿ ನಾಯಕರೇ, ದಿ.ಅನಂತಕುಮಾರ್ ಅವರ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ. ಎಲ್ಲವನ್ನೂ ಸಹಿಸಿಕೊಂಡಿರುವ ಧೈರ್ಯವಂತ ಹೆಣ್ಣು ತೇಜಸ್ವಿನಿಯವರು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶ್ರೀರಾಮುಲು ಹೇಳಿದ್ದೇನು?
ಹುಬ್ಬಳ್ಳಿಯ ಬೆಟದೂರು ಗ್ರಾಮದಲ್ಲಿ ಮಾತನಾಡಿದ್ದ ಶ್ರೀರಾಮುಲು ಅವರು, ಸಚಿವ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿದ್ದರು. ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣವಾಗಿದೆ. ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಸಚಿವರು ಮೃತಪಟ್ಟಿದ್ದಾರೆ. ಆದರೆ ಕುಂದಗೋಳದ ಜನರಿಗೆ ಸೇಡು ತಿರಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಹೇಳಿದ್ದರು.