ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ (Metro Fare Hike) ಮಾಡಿರೋದು ರಾಜ್ಯ ಸರ್ಕಾರ. ರಾಜ್ಯ ಸರ್ಕಾರವೇ ದರ ಏರಿಕೆ ಮಾಡಿ ಕೇಂದ್ರದ ಮೇಲೆ ಆರೋಪ ಮಾಡಿ ಸಿಎಂ, ಡಿಸಿಎಂ ನಿತ್ಯ ಡ್ರಾಮಾ ಮಾಡ್ತಾ ಇದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಪದೇ ಪದೇ ಕೇಂದ್ರಕ್ಕೆ ಪತ್ರ ಬರೆದು ಫೇರ್ ಫಿಕ್ಸ್ ಸಮಿತಿ ಮಾಡಬೇಕು ಅಂತ ಒತ್ತಾಯ ಮಾಡಿದ್ರು. ಅದರಂತೆ ಸಮಿತಿಯನ್ನು ಕೇಂದ್ರ ಮಾಡಿದೆ. ಈ ಫೇರ್ ಫಿಕ್ಸ್ ಸಮಿತಿ ಈಗ ದರ ಏರಿಕೆ ಮಾಡಿರೋದು. ಇದಕ್ಕೂ ಕೇಂದ್ರಕ್ಕೂ ಸಂಬಂಧ ಇಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸದ್ಯ ಸೋಮವಾರದಿಂದ ಮೆಟ್ರೋ ದರ ಏರಿಕೆ ಇಲ್ಲ: ತೇಜಸ್ವಿ ಸೂರ್ಯ ಸ್ಪಷ್ಟನೆ
ಮೆಟ್ರೋ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ MOU ಆಗಿದೆ. ರಾಜ್ಯ ಸರ್ಕಾರದ ಆಗ್ರಹದ ಮೇಲೆಯೇ ದರ ಏರಿಕೆ ಆಗಿರೋದು ಅಂತ ಕಿಡಿಕಾರಿದರು. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಹೀಗಾಗಿ ಜನರಿಗೆ ಏರಿಕೆ ಬರೆ ಹಾಕಿದ್ದಾರೆ. ಬಡವರು ಮೆಟ್ರೋದಲ್ಲಿ ಓಡಾಡದಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಸೋಮವಾರದಿಂದ ಆಗ್ತಿರೋ ಮೆಟ್ರೋ ಟಿಕೆಟ್ ದರ ನಿಲ್ಲಿಸಬೇಕು. ನಾಳೆ (ಫೆ.8) ಈ ಸಂಬಂಧ ಹೋರಾಟ ಮಾಡೋದಾಗಿ ತಿಳಿಸಿದರು.
ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ಫೇರ್ ಫಿಕ್ಸ್ ಕಮಿಟಿ ಮಾಡಿ ಅಂತ ರಾಜ್ಯ ಸರ್ಕಾರ ಪತ್ರ ಬರೆದರೆ ಅದನ್ನ ಹೋಲ್ಡ್ ನಲ್ಲಿ ಇಡಬೇಕು. ರಾಜ್ಯ ಸರ್ಕಾರ ಸಮಿತಿ ಬೇಕು ಅಂತ ಪತ್ರ ಬರೆದರೆ ಕೂಡಲೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಬೇಕು ಅಂತ ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರದ ಸಚಿವರು ಒಪ್ಪಿದ್ದಾರೆ ಅಂತ ತಿಳಿಸಿದರು.
ದರ ಏರಿಕೆ ವಿರುದ್ದ ಕೇಂದ್ರ ಸರ್ಕಾರ ಸುಮೋಟೋ ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಜ್ಯ-ಕೇಂದ್ರದ ನಡುವೆ MOU ಆಗಿದೆ. ಇದನ್ನ ಬಿಟ್ಟು ಸುಮೋಟೋವಾಗಿ ಏನೋ ನಿರ್ಧಾರ ಮಾಡಲು ಆಗೊಲ್ಲ. ಸಿಎಂ, ಡಿಸಿಎಂ ನಿತ್ಯ ಮೀಡಿಯಾದಲ್ಲಿ ಸುಳ್ಳು ಹೇಳ್ತಾ ಇದ್ದಾರೆ. ನಾಚಿಕೆ ಆಗೊಲ್ಲವಾ ಇವರಿಗೆ. ಈ ಸರ್ಕಾರದವರು ಏನ್ ತಿನ್ನುತ್ತಾರೆ ಅಂತ ಆಕ್ರೋಶ ಹೊರ ಹಾಕಿದರು.
ರಾಜ್ಯದ ಜನರು ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹಾಕಬೇಕು. ಹೊಸ ಫೇರ್ ಫಿಕ್ಸ್ ಕಮಿಟಿ ಮಾಡಲು ಕೇಂದ್ರಕ್ಕೆ ಪತ್ರ ಬರೆಯಲು ಒತ್ತಾಯ ಮಾಡಬೇಕು ಅಂತ ಜನರಿಗೆ ಸಲಹೆ ನೀಡಿದ್ರು. ಸಂಸದನಾಗಿ ನಾನು ಕೇಂದ್ರದ ಸಚಿವರ ಜೊತೆ ಮಾತಾಡಿದ್ದೇನೆ. ಮೆಟ್ರೋ ಮುಂದೆ ಪ್ರತಿಭಟನೆ ಮಾಡಿದ್ದೇನೆ. ಡಿಸಿಎಂ ಭೇಟಿಯಾಗಿ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದೇನೆ. ಕೋರ್ಟ್ ನಲ್ಲಿ ಹೋರಾಟ ಮಾಡಿದ್ದೇನೆ. ಇದಕ್ಕಿಂತ ಹೆಚ್ಚು ಸಂಸದನಾಗಿ ಮಾಡೋಕೆ ಏನು ಸಾಧ್ಯ? ಎಲ್ಲವೂ ಕೋರ್ಟ್‌ನಿಂದಲೇ ಆಗೊಲ್ಲ. ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ. ಇದನ್ನ ಮೊದಲು ನಿಲ್ಲಿಸಬೇಕು. ಕೂಡಲೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಿ ಅಂತ ಸಿಎಂ, ಡಿಸಿಎಂ ಅವರು ಕೇಂದ್ರಕ್ಕೆ ಪತ್ರ ಬರೆಯಬೇಕು ಅಂತ ಸಿಎಂಗೆ ಆಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ರಾಜ್ಯ ಸರ್ಕಾರ ಹಿಂಪಡೆಯಬೇಕು: ಎಸ್.ಆರ್.ವಿಶ್ವನಾಥ್

