ಬೆಂಗಳೂರು: ನೆಲಮಂಗಲ ಭಟ್ಟರಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ಬೆನ್ನಲ್ಲೇ ಕೆರೆಯ ಸುತ್ತಲಿನ ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಿದ್ದ ಕಂಟ್ರಾಕ್ಟರ್ ಗೆ ತಹಶೀಲ್ದಾರ್ ಬಿಸಿ ಮುಟ್ಟಿಸಿದ್ದಾರೆ.
ಭಟ್ಟರಹಳ್ಳಿ ಕೆರೆಯ ಪ್ರದೇಶದ ಸುತ್ತಲಿನ ಮಣ್ಣಿಗೆ ಕಂಟ್ರಾಕ್ಟರ್ ಒಬ್ಬರು ಕನ್ನ ಹಾಕಿದ್ದರು. ಈ ಬಗ್ಗೆ ಕಳೆದ ವಾರ ಪಬ್ಲಿಕ್ ಟಿವಿ ಕೆರೆಯ ಮಣ್ಣಿಗೆ ಕನ್ನ ಶೀರ್ಷಿಕೆ ಅಡಿ ಸುದ್ದಿ ಪ್ರಸಾರ ಮಾಡಿತ್ತು. ಅಲ್ಲದೆ ಈ ಬಗ್ಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ ಅಕ್ರಮವಾಗಿ ಕೆರೆಯ ಮಣ್ಣನ್ನ ತೆಗೆದಿದ್ದ ಕಂಟ್ರಾಕ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಖುದ್ದು ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್ ಅವರು ಕೆರೆಯನ್ನು ಪರಿಶೀಲಿಸಿ ಮಣ್ಣು ತೆಗೆದಿದ್ದ ಕಂಟ್ರಾಕ್ಟರ್‍ನಿಂದಲೇ 20 ಅಡಿಯಷ್ಟು ಮಣ್ಣನ್ನು ತರಿಸಿದ್ದಾರೆ. ಒಟ್ಟಾರೆ ಕೆರೆಯ ಅಂದ ಹಾಗೂ ಕೆರೆಯ ಮಣ್ಣನ್ನು ತೆಗೆದು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದ ಕಂಟ್ರಾಕ್ಟರ್ ವಿರುದ್ಧ ತಹಶೀಲ್ದಾರ್ ಕ್ರಮ ತೆಗೆದುಕೊಂಡಿದ್ದಾರೆ.