ಸಾಂದರ್ಭಿಕ ಚಿತ್ರ
ಭೋಪಾಲ್: ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ಸಾಕು ನಾಯಿ ರಕ್ಷಿಸಿದ ಘಟನೆ ಮಧ್ಯಪ್ರದೇಶದ ಸಗರ್ ಜಿಲ್ಲೆಯ ಕರೀಲಾ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
14 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಬಾಲಕಿಯು ಕೂಗುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ಬಂದ ಆಕೆಯ ಸಾಕು ನಾಯಿಯು, ಕಾಮುಕನೊಬ್ಬನ ಕಾಲಿಗೆ ಬಲವಾಗಿ ಕಚ್ಚಿ, ಜೋರಾಗಿ ಬೊಗಳುವುದರ ಮೂಲಕ ಇಬ್ಬರನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ.
ಏನಿದು ಪ್ರಕರಣ?
ಕಳೆದ ಶುಕ್ರವಾರ ರಾತ್ರಿ ಮನೆಯ ಬಳಿ ಕುಳಿತಿದ್ದ ಬಾಲಕಿಯನ್ನು ಅದೇ ಗ್ರಾಮದವರಾದ ಐಶು ಹೈರವಾರ್(39) ಹಾಗೂ ಪುನಿತ್ ಹೈರವಾರ್(24) ಎಂಬವರು ಕತ್ತಿ ತೋರಿಸಿ ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಕೂಗುತ್ತಿರುವುದನ್ನು ಗಮನಿಸಿ, ಸ್ಥಳಕ್ಕೆ ಬಂದ ಆಕೆಯ ಸಾಕು ನಾಯಿಯು ಇಬ್ಬರ ಮೇಲೆ ದಾಳಿಗೆ ಮುಂದಾಗಿ, ಐಶು ಹೈರ್‍ವಾರ್ ಎಂಬವನ ಕಾಲನ್ನು ಕಚ್ಚಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ನಾಯಿ ಮೇಲೆಯೆ ಕತ್ತಿಯಿಂದ ಹಲ್ಲೆಗೆ ಮುಂದಾಗಿದ್ದಾರೆ.
ನಾಯಿಯು ಕಾಮುಕರ ದಾಳಿಯನ್ನು ಹಿಮ್ಮೆಟ್ಟಿಸಿ, ಜೋರಾಗಿ ಅರಚತೊಡಗಿದೆ. ಈ ವೇಳೆ ಬಾಲಕಿಯು ಅವರಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ನಾಯಿ ಜೋರಾಗಿ ಬೊಗಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರನ್ನು ಕಂಡ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಆರೋಪಿಗಳ ವಿರುದ್ಧ ಬಾಲಕಿಯ ಪೋಷಕರು ಶನಿವಾರ ದೂರನ್ನು ನೀಡಿದ್ದು, ಭಾನುವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv