ಲಕ್ನೋ: ಇಬ್ಬರು ಅಪ್ರಾಪ್ತ ಸಹೋದರಿಯರನ್ನ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.
ಮೃತರನ್ನ 17 ವರ್ಷದ ಸಂಧ್ಯಾ ಹಾಗೂ 13 ವರ್ಷದ ಶಾಲು ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಇಬ್ಬರು ಸಹೋದರಿಯರ ಮೃತದೇಹ ಕೆಲಾಮು ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೃತ ದೇಹಗಳನ್ನು ನೋಡಿದ ತಕ್ಷಣ ಸ್ಥಳೀಯರು ಅವರ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ದೇಹಗಳ ಸ್ಥಳದಲ್ಲಿ ಗುಂಡುಗಳು ಮತ್ತು ಚಪ್ಪಲಿಗಳು ಕಂಡು ಬಂದಿದೆ.
Advertisement
Advertisement
ಸಹೋದರಿಯರಿಬ್ಬರು ಸೋಮವಾರ ಸಂಜೆ ಶೌಚಾಯಲಕ್ಕೆಂದು ತೆರಳಿದ್ದರು. ಆದರೆ ತುಂಬಾ ಸಮಯವಾದರೂ ಮನೆಗೆ ಹಿಂದಿರುಗಿರಲಿಲ್ಲ. ಬಳಿಕ ಕುಟುಂಬದವರು ಗ್ರಾಮದಲ್ಲಿ ನಡೆಯುತ್ತಿರುವ ಮದುವೆಗೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಮುಂಜಾನೆ ಮಕ್ಕಳ ಶವವನ್ನು ಕಂಡು ಆಘಾತಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದೇವೆ. ಆದರೆ ಗ್ರಾಮಸ್ಥರು ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅಂತ ಶಂಕಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಶೋಕ್ ತ್ರಿಪಾಠಿ ತಿಳಿಸಿದ್ದಾರೆ.
ಬೆಳಿಗ್ಗೆ ಕರೆ ನಮ್ಮ ಮಕ್ಕಳ ಹತ್ಯೆಯ ಬಗ್ಗೆ ತಿಳಿಸಿದಾಗ ನಮಗೆ ಆಘಾತವಾಯಿತು. ನಾವು ಯಾರೊಂದಿಗೂ ಯಾವುದೇ ದ್ವೇಷವನ್ನು ಇಟ್ಟುಕೊಂಡಿಲ್ಲ. ಆದರೆ ಯಾಕೆ ನಮ್ಮ ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾರೆ ಅಂತ ತಿಳಿದಿಲ್ಲ ಎಂದು ಹುಡುಗಿಯರ ತಂದೆ ನೋವಿನಲ್ಲಿ ಹೇಳಿದ್ದಾರೆ.
ಪೊಲೀಸರು ಅಪರಿಚಿತರ ವಿರುದ್ಧ ದೂರು ದಾಖಲು ಮಾಡಿ ತನಿಖೆ ಆರಂಭಿಸಿದ್ದು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸ್ಥಳದಲ್ಲಿ ಬಿದ್ದಿದ್ದ ಬುಲೆಟ್ ಹಾಗೂ ಚಪ್ಪಲಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಶೋಕ್ ತ್ರಿಪಾಠಿ ತಿಳಿಸಿದ್ದಾರೆ.
ಇಟವಾ ಕ್ಷೇತ್ರದ ಶಾಸಕರಾಗಿರುವ ಸರಿತಾ ಭದೌರಿಯಾ ಪ್ರತಿಕ್ರಿಯಿಸಿ, ನಿಷ್ಪಕ್ಷಪಾತ ತನಿಖೆಯನ್ನು ಮಾಡಲಾಗುತ್ತದೆ. ಆರೋಪಿಗಳನ್ನ ಶೀಘ್ರವಾಗಿ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.