ಕೌಲಾಲಂಪುರ: 16 ವರ್ಷದ ಬಾಲಕಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ನಾನು ಸಾಯಬೇಕಾ? ಇಲ್ಲವಾ? ಎಂದು ಪೋಲ್ ಸೃಷ್ಟಿಸಿ ಆತ್ಮಹತ್ಯೆಗೆ ಶರಣಾದ ಶಾಕಿಂಗ್ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
ಬಾಲಕಿ ಮೇ 13ರಂದು ತನ್ನ ಇನ್‍ಸ್ಟಾಗ್ರಾಂನಲ್ಲಿ “ಇದು ತುಂಬಾ ಮುಖ್ಯವಾದ ವಿಷಯ. ನನಗೆ ಸಹಾಯ ಮಾಡಿ. ಡಿ ಅಥವಾ ಎಲ್(ಸಾಯಬೇಕಾ ಅಥವಾ ಬದುಕಬೇಕಾ) ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ” ಎಂದು ಬರೆದು ಪೋಲ್ ಸೃಷ್ಟಿಸಿದ್ದಳು.
ಬಾಲಕಿಯ ಇನ್‍ಸ್ಟಾಗ್ರಾಂ ಪೋಲ್‍ಗೆ ಶೇ.69ರಷ್ಟು ಫಾಲೋವರ್ಸ್ ‘ಸಾಯಬೇಕು’ ಎಂದು ವೋಟ್ ಹಾಕಿದ್ದರು. ಈ ಫಲಿತಾಂಶದಿಂದ ಖಿನ್ನತೆಗೆ ಒಳಗಾದ ಬಾಲಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸರಾವಾಕ್ ನಗರದ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಸಾವಿಗೆ ಆಕೆಯ ಇನ್‍ಸ್ಟಾಗ್ರಾಂನಲ್ಲಿ ಸಾಯಬೇಕು ಎಂದು ವೋಟ್ ಹಾಕಿದವರೇ ಕಾರಣರಾಗುತ್ತಾರೆ. ಏಕೆಂದರೆ ಅವರೇ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ರಾಮ್‍ಕೃಪಾಲ್ ಸಿಂಗ್ ಹೇಳಿದ್ದಾರೆ.
ಈ ದೇಶದ ಯುವ ಜನತೆಯ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗುತ್ತಿದೆ. ಏಕೆಂದರೆ ಇದು ರಾಷ್ಟ್ರೀಯ ಸಮಸ್ಯೆ ಹಾಗೂ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಲೇಷ್ಯಾದ ಯುವ ಹಾಗೂ ಕ್ರೀಡಾ ಸಚಿವರಾದ ಸಯ್ಯದ್ ಸಾದಿಕ್ ಸಯ್ಯದ್ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.