ಆಧುನಿಕ ಜಗತ್ತಿನಲ್ಲಿ ಮನುಕುಲವನ್ನು ಕೋವಿಡ್‌ನಷ್ಟು ತಲ್ಲಣಗೊಳಿಸಿದ ಮತ್ತೊಂದು ರೋಗವಿಲ್ಲ. ಕೇವಲ ಆರೋಗ್ಯವಷ್ಟೇ ಅಲ್ಲ, ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಅದು ಬೀರಿದ ಪರಿಣಾಮ ಭೀಕರವಾಗಿತ್ತು. ಕೊರೊನಾ ಸಾಂಕ್ರಾಮಿಕವು ಜಾಗತಿಕವಾಗಿ ಜನರ ಮೇಲೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಿತು. ಇದು ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಸದ್ಯಕ್ಕೆ ಕೊರೊನಾ ಹಾವಳಿ ತಗ್ಗಿದೆಯಾದರೂ, ಮಾನವನ ದೇಹದಲ್ಲಿ ಅದರಿಂದಾಗುತ್ತಿರುವ ಎಫೆಕ್ಟ್ ಇನ್ನೂ ನಿಂತಿಲ್ಲ. ಕೋವಿಡೋತ್ತರ ಪರಿಣಾಮಗಳಿಂದ ಜನರು ಇನ್ನೂ ಬಳಲುತ್ತಿದ್ದಾರೆ.
ಹದಿಹರೆಯದ ಹೆಣ್ಣುಮಕ್ಕಳ ಮೇಲಿನ ಕೋವಿಡೋತ್ತರ ಎಫೆಕ್ಟ್ ಆತಂಕ ಮೂಡಿಸಿದೆ. ಹರೆಯದ ಹೆಣ್ಣುಮಕ್ಕಳ ಮಿದುಳಿಗೆ ಬಹುಬೇಗ ವಯಸ್ಸಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ವೈದ್ಯಕೀಯ ಲೋಕ ಬಿಚ್ಚಿಟ್ಟಿದೆ. ಕೊರೊನಾ ಸಾಂಕ್ರಾಮಿಕದ ಪರಿಣಾಮ ಇದು ಎಂಬ ಅಂಶವನ್ನು ಸಂಶೋಧನಾ ವರದಿ ಉಲ್ಲೇಖಿಸಿದೆ. ಹಾಗಾದ್ರೆ, ಹದಿಹರೆಯದವರ ಮಿದುಳಲ್ಲಿ ಏನಾಗ್ತಿದೆ? ಯಾಕೆ ಬೇಗ ವಯಸ್ಸಾಗ್ತಿದೆ? ಈ ಬಗ್ಗೆ ಸಂಶೋಧನಾ ವರದಿ ಏನು ಹೇಳ್ತಿದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.
Advertisement
ಹೆಣ್ಣುಮಕ್ಕಳ ಮಿದುಳಲ್ಲಿ ಏನಾಗ್ತಿದೆ?
ಕೋವಿಡ್-19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ನಾಲ್ಕು ವರ್ಷಗಳ ನಂತರ, ವಿಜ್ಞಾನಿಗಳು ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡುವುದನ್ನು ಮುಂದುವರೆಸಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರ ಇತ್ತೀಚಿನ ಅಧ್ಯಯನವು ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳ ಸಮಯದಲ್ಲಿ ಅನೇಕ ಹದಿಹರೆಯದವರ ಮಿದುಳಿಗೆ ಬೇಗ ವಯಸ್ಸಾಗುತ್ತಿದೆ. ಹುಡುಗಿಯರ ಮೇಲೆ ಹೆಚ್ಚು ತೀವ್ರವಾಗಿ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದೆ.
Advertisement
Advertisement
ಸಂಶೋಧಕರು 2018 ರಲ್ಲಿ 9-17 ವರ್ಷ ವಯಸ್ಸಿನ 160 ಮಕ್ಕಳಿನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಿದ್ದರು. ಶಾಲಾ ವರ್ಷಗಳಲ್ಲಿ ಅವರ ಮಿದುಳಿನ ಕಾರ್ಟೆಕ್ಸ್ ಸಾಮಾನ್ಯವಾಗಿ ತೆಳುವಾಗುವುದನ್ನು ಅಧ್ಯಯನ ಮಾಡಲು ಅವುಗಳನ್ನು ಬಳಸಿದ್ದರು. ಲಾಕ್‌ಡೌನ್ ನಂತರ, ಸಂಶೋಧಕರು 2021 ಮತ್ತು 2022 ರಲ್ಲಿ 12-16 ರ ವಯೋಮಾನದ ಅದೇ ಮಕ್ಕಳನ್ನು ಮತ್ತೊಮ್ಮೆ ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಿದರು. ಹುಡುಗರ ಮಿದುಳಿನಲ್ಲಿ ಒಂದು ಕಡೆ ಕಾರ್ಟಿಕಲ್ ತೆಳುವಾದರೆ, ಹುಡುಗಿಯರ ಮಿದುಳಿನ 30 ಭಾಗಗಳಲ್ಲಿ ಅಚ್ಚರಿ ಎಂಬಂತೆ ಕಾರ್ಟಿಕಲ್ ತೆಳುವಾಗಿರುವುದು ಕಂಡುಬಂದಿದೆ.
Advertisement
ಮಿದುಳಿನ ಕಾರ್ಟಿಕಲ್ ವೇಗವಾಗಿ ತೆಳುವಾಗ್ತಿದೆಯೇ?
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ನಲ್ಲಿ ಪ್ರಕಟವಾದ ಅಧ್ಯಯನವು ಹದಿಹರೆಯದವರ ಮೆದುಳಿನ ರಚನೆಯ ಮೇಲೆ ಕೋವಿಡ್-19 ಲಾಕ್‌ಡೌನ್‌ಗಳ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದೆ. ಕಾರ್ಟಿಕಲ್ ಗಾತ್ರದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು, ಕೊರೊನಾ ಲಾಕ್‌ಡೌನ್‌ಗೂ ಮೊದಲು ಮತ್ತು ನಂತರದ ಅವಧಿಯಲ್ಲಿ ಹದಿಹರೆಯದವರಿಂದ ಎಂಆರ್‌ಐ ಡೇಟಾವನ್ನು ಸಂಶೋಧಕರು ಸಂಗ್ರಹಿಸಿದರು. ಇದು ಮೆದುಳಿನ ರಚನೆಯ ಅಳತೆಯಾಗಿದೆ. ಲಾಕ್‌ಡೌನ್ ಪೂರ್ವ ಮತ್ತು ನಂತರದ ಅವಧಿಯಲ್ಲಿ ಹದಿಹರೆಯದವರ ಮಿದುಳಿನ ಬೆಳವಣಿಗೆ ಬಗ್ಗೆ ಸಂಶೋಧನೆ ನಡೆಯಿತು. ಹುಡುಗರು ಮತ್ತು ಹುಡುಗಿಯರ ಡೇಟಾಗಳನ್ನು ಹೋಲಿಕೆ ಮಾಡಿ ನೋಡಲಾಯಿತು. ಇಬ್ಬರಲ್ಲೂ ಕಾರ್ಟಿಕಲ್ ವೇಗವಾಗಿ ತೆಳುವಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಕಾರ್ಟೆಕ್ಸ್ ತೆಳುವಾಗುವಿಕೆ ಅಪಾಯಕಾರಿಯೇ?
ಕಾರ್ಟೆಕ್ಸ್ ತೆಳುವಾಗುವುದು ಅಪಾಯಕಾರಿಯಲ್ಲ. ಕಾರ್ಟಿಕಲ್ ತೆಳುವಾಗುವುದು ಸೆರೆಬ್ರಲ್ ಕಾರ್ಟೆಕ್ಸ್ನ ಗಾತ್ರದಲ್ಲಿನ ತಗ್ಗುವಿಕೆಯನ್ನು ಸೂಚಿಸುತ್ತದೆ. ಮಿದುಳಿನ ಹೊರಗಿನ ಪದರವು ಆಲೋಚನೆ, ಗ್ರಹಿಕೆ ಮತ್ತು ಸ್ವಯಂಪ್ರೇರಿತ ಚಲನೆಯಂತಹ ಕಾರ್ಯಗಳಿಗೆ ಕಾರಣವಾಗಿದೆ. ಈ ತೆಳುವಾಗುವುದು ಮೆದುಳಿನ ಬೆಳವಣಿಗೆಯ ನೈಸರ್ಗಿಕ ಭಾಗವೇ ಆಗಿದೆ. ಕಾರ್ಟೆಕ್ಸ್ ತೆಳುವಾಗುವಿಕೆ ಸಮಸ್ಯೆಯ ಸೂಚನೆಯಲ್ಲ, ಬುದ್ದಿಶಕ್ತಿಯ ಪಕ್ಷತೆಯ ಸಂಕೇತವಾಗಿದೆ. ಆದರೆ, ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಒತ್ತಡದ ಪರಿಸ್ಥಿತಿಗಳು ತೆಳುವಾಗುವಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತವೆ ಎಂಬುದು ಗೊತ್ತಾಗಿದೆ.
ಸಂಶೋಧಕರು ಹೇಳೋದೇನು?
2021 ರಲ್ಲಿ ನಡೆಸಿದ ಸ್ಕ್ಯಾನ್‌ಗಳ ವರದಿ ಪ್ರಕಾರ, ಆ ಅವಧಿಯಲ್ಲಿ ಹುಡುಗರು ಮತ್ತು ಹುಡುಗಿಯರು ಕ್ಷಿಪ್ರ ಕಾರ್ಟಿಕಲ್ ತೆಳುವಾಗುವುದನ್ನು ಅನುಭವಿಸಿದ್ದಾರೆ. ಆದರೆ ಇದರ ಪರಿಣಾಮವು ಹುಡುಗಿಯರಲ್ಲಿ ಹೆಚ್ಚು ಗಮನಾರ್ಹವಾಗಿದೆ. ಹೆಣ್ಣುಮಕ್ಕಳ ಸರಾಸರಿ ವಯಸ್ಸಿಗಿಂತ 4.2 ವರ್ಷಗಳಷ್ಟು ಹೆಚ್ಚು ವಯಸ್ಸು ಅವರ ಮಿದುಳಿಗೆ ಆಗುತ್ತಿದೆ. ಹುಡುಗರ ಮಿದುಳಿನಲ್ಲಿ ತೆಳುವಾಗುವಿಕೆಯು ನಿರೀಕ್ಷಿಸಿದ್ದಕ್ಕಿಂತ 1.4 ವರ್ಷಗಳಷ್ಟು ಮುಂದಿದೆ.
ಉದಾಹರಣೆಗೆ: ಹೆಣ್ಣುಮಕ್ಕಳು ತಮ್ಮ 11ನೇ ವಯಸ್ಸಿನಲ್ಲಿ ಒಮ್ಮೆ ಸಂಶೋಧನೆಗೆ ಒಳಪಟ್ಟಿದ್ದರು. ನಂತರ ಮತ್ತೆ 14ನೇ ವಯಸ್ಸಿಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಗಾದರು. ಈ ಸಂದರ್ಭದಲ್ಲಿ ಅವರ ಮಿದುಳು 18 ವರ್ಷ ವಯಸ್ಸಾದಂತಹ ರಚನೆಯನ್ನು ಹೊಂದಿದೆ.
ಹೆಣ್ಣುಮಕ್ಕಳಿಗೆ ಏಕೆ ಈ ಸಮಸ್ಯೆ?
ಸಾಂಕ್ರಾಮಿಕ ರೋಗದಿಂದ ಈ ಸಮಸ್ಯೆ ಉಂಟಾಗಿದೆ. ಇದು ಹದಿಹರೆಯದ ಹುಡುಗಿಯರನ್ನೇ ಹೆಚ್ಚು ಭಾದಿಸಿದೆ. ಸಾಮಾಜಿಕ ಜೀವನದ ಮೇಲೆ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಅವಲಂಬಿತರಾಗಿದ್ದಾರೆ. ಹೆಣ್ಣುಮಕ್ಕಳು ಸ್ನೇಹಿತರೊಟ್ಟಿಗೆ ಕಷ್ಟ-ಸುಖ, ಭಾವನೆಗಳನ್ನು ಹೆಚ್ಚು ಹಂಚಿಕೊಳ್ಳುವ ಮನೋಭಾವದವರು. ಆ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುತ್ತಿದ್ದರು. ಭಾವನಾತ್ಮಕ ವಿಚಾರಗಳಲ್ಲಿ ಸಮಾಜದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಕೋವಿಡ್ ಲಾಕ್‌ಡೌನ್ ಅವರ ಸಾಮಾಜಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಅವರ ಮಿದುಳಿನ ಮೇಲೆ ಪರಿಣಾಮ ಬೀರಿದೆ. ಲಾಕ್‌ಡೌನ್ ಅವರ ಒಂಟಿತನದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಿದೆ ಎಂದು ವಾಷಿಂಗ್ಟನ್ ವಿವಿಯ ಇನ್‌ಸ್ಟಿಟ್ಯೂಟ್ ಫಾರ್ ಲರ್ನಿಂಗ್ & ಬ್ರೆöÊನ್ ಸೈನ್ಸಸ್‌ನ ಸಹ ನಿರ್ದೇಶಕ ಕುಹ್ಲ್ ತಿಳಿಸಿದ್ದಾರೆ.
ಆಲ್‌ಝೈಮರ್ಸ್, ಪಾರ್ಕಿನ್ಸನ್‌ಗೆ ಕಾರಣ?
ಕಾರ್ಟಿಕಲ್ ವೇಗವರ್ಧಿತ ತೆಳುವಾಗುವಿಕೆಯು ಆಲ್‌ಝೈಮರ್ಸ್ ಮತ್ತು ಪಾರ್ಕಿನ್ಸನ್‌ನಂತಹ ವೃದ್ಧಾಪ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನರಮಾನಸಿಕ ಅಸ್ವಸ್ಥತೆ ಅಪಾಯವನ್ನೂ ತಂದೊಡ್ಡಬಹುದು. ಖಿನ್ನತೆ ಅಥವಾ ಆತಂಕದಂತಹ ಮನೋವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಸಂಶೋಧಕರಾದ ಕೊರಿಗನ್ ಹೇಳಿದ್ದಾರೆ.
ಪೋಷಕರಿಗೆ ಎಚ್ಚರಿಕೆಯ ಕರೆಗಂಟೆ!
ಈ ಸಂಶೋಧನೆಯು ಮಕ್ಕಳ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಕ್ಕಳಲ್ಲಿ ಕಂಡುಬರುವ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತನಾಡುವ, ಅವರಿಗೆ ಬಾವನಾತ್ಮಕ ಬೆಂಬಲ ನೀಡುವ ಮೂಲಕ ಇಂತಹ ಸಮಸ್ಯೆ ತಡೆಯಲು ಸಹಾಯ ಮಾಡಬಹುದು ಎಂದು ಕೊರಿಗನ್ ತಿಳಿಸಿದ್ದಾರೆ.