Connect with us

Latest

4 ತಿಂಗಳ ಹಿಂದೆ ಗ್ಯಾಂಗ್‍ರೇಪ್, ಮತ್ತೆ ಅತ್ಯಾಚಾರದ ಬೆದರಿಕೆ- 15ರ ಬಾಲಕಿ ಆತ್ಮಹತ್ಯೆ

Published

on

ಲಕ್ನೋ: ನಾಲ್ಕು ತಿಂಗಳ ಹಿಂದೆ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ದುಷ್ಕರ್ಮಿಗಳು ಕಳೆದ ಶುಕ್ರವಾರ ಮತ್ತೆ ಆಕೆಯ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಭಾಗ್‍ಪತ್‍ನಲ್ಲಿ ನಡೆದಿದೆ.

ಮೊದಲಿಗೆ ಬಾಲಕಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋನು, ಮೋನು, ರೋಹಿತ್, ಸಾಗರ್ ಮತ್ತು ಪಪ್ಪು ಬಂಧಿತ ಆರೋಪಿಗಳು. ಈ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮೃತ ಬಾಲಕಿಯ ತಾಯಿ ಈ ಬಗ್ಗೆ ಹೇಳಿಕೆ ನೀಡಿದ್ದು, ನನ್ನ ಮಗಳು 8ನೇ ತರಗತಿ ಓದುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕೆಲ ಸಾಮಗ್ರಿಗಳನ್ನು ತರಲು ಹತ್ತಿರದ ಅಂಗಡಿಗೆ ಹೋದವಳು ವಾಪಸ್ ಬಂದಿರಲಿಲ್ಲ. ನಂತರ ಗ್ರಾಮದ 5 ಯುವಕರು ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದ್ರೆ ದೂರು ದಾಖಲಿಸಿದ್ರೂ ಪೊಲೀಸರು ತನಿಖೆ ಮಾಡಿರಲಿಲ್ಲ. ಆಕೆ ಕಾಣೆಯಾದ 5 ದಿನಗಳ ಬಳಿಕ ಆರೋಪಿಗಳು ನನ್ನ ಮಗಳನ್ನು ರಮಾಲಾ ಪೊಲೀಸ್ ಠಾಣೆಯ ಹೊರಗೆ ಎಸೆದು ಹೋಗಿದ್ದರು ಎಂದು ಹೇಳಿದ್ದಾರೆ.

ಬಾಲಕಿಗೆ ಪ್ರಜ್ಞೆ ಬಂದ ಬಳಿಕ ನಡೆದ ಘಟನೆಯ ಬಗ್ಗೆ ವಿವರಿಸಿದ್ದಳು. ನಾಲ್ಕು ಯುವಕರು ತನ್ನನ್ನು ಅಪಹರಿಸಿ ರೂಮ್‍ವೊಂದಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‍ರೇಪ್ ಮಾಡಿದ್ರು ಎಂದು ಹೇಳಿದ್ದಳು. ಈ ಬಗ್ಗೆ ಬಾಲಕಿಯ ಕುಟುಂಬಸ್ಥರು ದೂರು ದಾಖಲಿಸಿದ್ರೂ ಪೊಲೀಸರು ತನಿಖೆ ನಡೆಸದೇ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಆರೋಪಿಸಲಾಗಿದೆ.

ಶುಕ್ರವಾರದಂದು ಮತ್ತೆ ಬಾಲಕಿ ಹತ್ತಿರದ ಅಂಗಡಿಗೆ ಹೋದಾಗ ಆರೋಪಿಗಳು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಾಲಕಿ ಕೂಡಲೇ ಮನೆಗೆ ಹೋಗಿ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಆದ್ರೆ ಮನೆಯವರು ಪೊಲೀಸ್ ಠಾಣೆಗೆ ಹೋಗುವ ಮೊದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಭಾಗ್‍ಪತ್ ಎಸ್‍ಪಿ ಜೈಪ್ರಕಾಶ್, ರಮಾಲಾ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತು ಮಾಡಿದ್ದಾರೆ. ಅವರ ವಿರುದ್ಧ ಇಲಾಖಾ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಅತ್ತ ಪೊಲೀಸರು ಈ ಬಗ್ಗೆ ಹೇಳಿಕೆ ನೀಡಿದ್ದು, ಬಾಲಕಿ ಮೇಲೆ ಅತ್ಯಾಚಾರ ನಡೆದೇ ಇರಲಿಲ್ಲ. ಹೀಗಾಗಿ ಕ್ಲೀನ್ ಚಿಟ್ ನೀಡಿದೆವು ಎಂದಿದ್ದಾರೆ. ಆದ್ರೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಹೇಳಿಕೆಯನ್ನೂ ಪಡೆಯಲಾಗಿತ್ತು ಎಂದು ವರದಿಯಾಗಿದೆ.

ಶನಿವಾರದಂದು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅತ್ಯಾಚಾರ ಪ್ರಕರಣವನ್ನು ಮತ್ತೊಮ್ಮೆ ತನಿಖೆ ಮಾಡುವುದಾಗಿ ಎಸ್‍ಪಿ ಜಯಪ್ರಕಾಶ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *