ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಗ್ರ ಪೀಡಿತ ಪ್ರದೇಶದಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕ ಹಾಗೂ ಇಬ್ಬರು ನಾಗರಿಕರ ಶವಗಳು ಕಥುವಾ ಜಿಲ್ಲೆಯ ಲೋಹೈ ಮಲ್ಹಾರ್ ಪ್ರದೇಶದಲ್ಲಿ ಪತ್ತೆಯಾಗಿದೆ.
ಮೃತರನ್ನು ಯೋಗೇಶ್ ಸಿಂಗ್, ದರ್ಶನ್ ಸಿಂಗ್ ಮತ್ತು ಅಪ್ರಾಪ್ತ ಬಾಲಕ ವರುಣ್ ಸಿಂಗ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಬಿಲ್ಲಾವರ್ ಪಟ್ಟಣದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಮೂವರು ನಾಪತ್ತೆಯಾಗಿದ್ದರು. ನಾಪತ್ತೆಯಾದವರಲ್ಲಿ ಒಬ್ಬರು ಎರಡು ದಿನಗಳ ಹಿಂದೆ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ, ಕಾಡಿನಲ್ಲಿ ದಾರಿ ತಪ್ಪಿದ್ದಾಗಿ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ. ಮೂವರನ್ನು ಪತ್ತೆಹಚ್ಚಲು ಸೇನೆ ಮತ್ತು ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಮೂವರ ಶವಗಳು ಲೋಹೈ ಮಲ್ಹಾರ್ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅವರ ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದಕರು (Terrorist) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು, ಅದೇ ಪ್ರದೇಶದಲ್ಲಿ ಇಬ್ಬರು ನಾಗರಿಕರು ಸಹ ಸಾವನ್ನಪ್ಪಿದ್ದರು.
ಈ ಘಟನೆಯನ್ನು ಬಿಜೆಪಿ (BJP) ವಕ್ತಾರ ಆರ್.ಎಸ್. ಪಠಾನಿಯಾ ಭಯೋತ್ಪಾದಕರಿಂದ ನಡೆದ ಹತ್ಯೆ ಎಂದು ಆರೋಪಿಸಿದ್ದಾರೆ. ಈ ಸಾಮೂಹಿಕ ಹತ್ಯೆಯನ್ನು ಉಗ್ರಗಾಮಿಗಳು ಮಾಡಿದ್ದಾರೆ ಎಂದು ಪುರಾವೆಗಳು ಸೂಚಿಸುತ್ತವೆ. ನಾಗರಿಕರನ್ನು ಹತ್ಯೆಗೈದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಯೋತ್ಪಾದನೆಯು ಕೊನೆಯ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ.