ನವದೆಹಲಿ: ಅಬ್ ಕೀ ಬಾರ್ 400 ಪಾರ್ (Abki Baar 400 Paar) ಘೋಷಣೆ ಮೊಳಗಿಸುತ್ತಿರುವ ಬಿಜೆಪಿ (BJP) ಲೋಕಸಭಾ ಚುನಾವಣೆಯನ್ನು (Lok Sabha Election) ಗೆಲ್ಲಲು ಕೃತಕ ಬುದ್ಧಿಮತ್ತೆಯ (Artificial Intelligence) ಮೊರೆ ಹೋಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಈ ಬಾರಿ ಹೆಚ್ಚಿನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ಎಐ ತಂತ್ರಜ್ಞಾನ ಬಳಸಲು ಮುಂದಾಗಿದೆ. ಈ ಮೂಲಕ ಚುನಾವಣಾ ಭಾಷಣವನ್ನು ತರ್ಜುಮೆ ಮಾಡಲು ಎಐ ತಂತ್ರಜ್ಞಾನವನ್ನು ಬಳಸುತ್ತಿರುವುದು ವಿಶ್ವದಲ್ಲೇ ಮೊದಲು ಎಂದು ಬಿಜೆಪಿ ಹೇಳಿಕೊಂಡಿದೆ.
Advertisement
Advertisement
ಯಾಕೆ ಎಐ?
ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕರು ಇರುವ ಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಾ ಬಂದಿದೆ. ಆದರೆ ದಕ್ಷಿಣದಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಬರುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ 129 ಕ್ಷೇತ್ರಗಳ ಪೈಕಿ ಬಿಜೆಪಿ ಜಯಗಳಿದ್ದು ಕೇವಲ 29. ಅದರಲ್ಲೂ ಬಹುಪಾಲು ಕರ್ನಾಟಕದಿಂದ (25+1) ಬಂದಿತ್ತು. ಹೀಗಾಗಿ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಜನರನ್ನು ಸೆಳೆಯಲು ಬಿಜೆಪಿ ಎಐ ಸಹಾಯ ಪಡೆಯಲು ಮುಂದಾಗಿದೆ. ಇದನ್ನೂ ಓದಿ: 15 ವರ್ಷದ ಬಳಿಕ ಘರ್ ವಾಪ್ಸಿ – ಮರಳಿ ಬಿಜೆಪಿ ಜೊತೆ ಬಿಜೆಡಿ ಮೈತ್ರಿ?
Advertisement
Advertisement
ಸಹಾಯ ಹೇಗೆ?
ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ. ಒಂದು ದಿನದಲ್ಲಿ ಗರಿಷ್ಠ 3-4 ಸ್ಥಳಗಳಲ್ಲಿ ಮೋದಿ ಪ್ರಚಾರ ಮಾಡುತ್ತಾರೆ. ಹೀಗಾಗಿ ದಕ್ಷಿಣ ರಾಜ್ಯಗಳಿಗೆ ಮೋದಿ ಭೇಟಿ ನೀಡಿದ ವೇಳೆ ಮಾಡಿದ ಚುನಾವಣಾ ಪ್ರಚಾರ ಭಾಷಣಗಳನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತತ್ಕ್ಷಣದಲ್ಲಿ ತರ್ಜುಮೆ ಮಾಡಿ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಿದೆ. ಈ ತಂತ್ರದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸುಲಭವಾಗಿ ತಲುಪಬಹುದು ಎಂದು ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ದಕ್ಷಿಣದ ಈ ರಾಜ್ಯಗಳ ಜೊತೆ ಪಂಜಾಬ್, ಒಡಿಶಾ, ಮಹಾರಾಷ್ಟ್ರದಲ್ಲೂ ಇದೇ ತಂತ್ರ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ನಡೆದ ಕಾಶಿ-ತಮಿಳು ಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಭಾಷಣವನ್ನು ಆ ಕ್ಷಣದಲ್ಲೇ ತಮಿಳು ಭಾಷೆಗೆ ತರ್ಜುಮೆ ಮಾಡಲಾಗುತ್ತಿತ್ತು. ರಿಯಲ್ ಟೈಮ್ನಲ್ಲೇ ತರ್ಜುಮೆಯಾದ ಕಾರಣ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಇದನ್ನೂ ಓದಿ: ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್ ಕೊಟ್ಟ ಕಾಂಗ್ರೆಸ್