ಕನ್ನಡದ ಹೆಸರಾಂತ ಹಿರಿಯ ನಟ ಅನಂತ್ ನಾಗ್ (Anant Nag) ಮತದಾನ ಮಾಡುವುದಕ್ಕಾಗಿ ಬೆಂಗಳೂರು ನಾರ್ತ್ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಅಶ್ವಥ್ ನಗರ ಮತಗಟ್ಟೆ ಆಗಮಿಸಿದ್ದರು. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ 15 ನಿಮಿಷಕ್ಕೂ ಹೆಚ್ಚು ಕಾಲ ಅನಂತ್ ನಾಗ್ ಕಾಯಬೇಕಾಯಿತು. ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಕಾಯೋದು ಅನಿವಾರ್ಯವಾಗಿತ್ತು.
ಮತಗಟ್ಟೆಯಲ್ಲೇ ಅನಂತ್ ನಾಗ್ ಅವರಿಗೆ ಸಿಬ್ಬಂದಿ ಕುರ್ಚಿ ಹಾಕಿ ಕೂರಿಸಿದ್ದರು. ಹೊಸ ಮತಯಂತ್ರ ತಂದು ಜೋಡಣೆ ಮಾಡಿದ ನಂತರ ಅನಂತ್ ನಾಗ್ ಮತ್ತು ಪತ್ನಿ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಅನಂತ್ ನಾಗ್, ಮತಹಾಕದವರ ವಿರುದ್ದ ಆಕ್ರೋಶ ಹೊರ ಹಾಕಿದರು. ಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ ಎಂದು ಸಲಹೆ ನೀಡಿದರು.
- Advertisement
- Advertisement
ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತೆ ಯಾಕೆ? ಯಾರು ನಿರಂತರವಾಗಿ ಮತಹಾಕೋದಿಲ್ವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡ್ತಾರೆ. ಇವರು ಮನೆಯಿಂದ ಹೊರಬಂದು ಒಂದು ವೋಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು, ಇನ್ನೂ ಎಂಥಾ ಜಾಗೃತಿ ಬೇಕು. ಇಲ್ಲಿ ಯೂತ್, ಹಿರಿಯರು ಅನ್ನೋ ಪ್ರಶ್ನೆ ಇಲ್ಲ ಎಲ್ಲರನ್ನೂ ಒಂದೇ ಥರ ನೋಡಿ. ಯಾರು ಮತಹಾಕೋಕೆ ಬರಲ್ಲ ಲಿಸ್ಟ್ ನಿಂದ ತೆಗೆದುಹಾಕಿ ಎಂದರು.
ಹೊಸ ಸರ್ಕಾರದಿಂದ ನಿರೀಕ್ಷೆ ಏನು ಎಂಬ ಪ್ರಶ್ನೆಗೆ, ಮುಂದಿನ ಒಂದು ವರ್ಷದಲ್ಲಿ 75 ವರ್ಷಗಳಲ್ಲಿ ಆಗದ ಕೆಲಸಗಳನ್ನ ಮಾಡಬೇಕು. ಇದನ್ನ ಹೊಸ ಸರ್ಕಾರದಿಂದ ನಾನು ನಿರೀಕ್ಷೆ ಮಾಡ್ತೇನೆ ಎಂದು ಅನಂತ್ ನಾಗ್ ತಿಳಿಸಿದರು.