ಬೆಂಗಳೂರು: ಗಂಡನ ಹಿಂಸೆ ತಾಳಲು ಆಗುತ್ತಿಲ್ಲ. ಇಂದು ನನ್ನ ಕೊನೆ ದಿನ ಎಂದು ಮಹಿಳಾ ಟೆಕ್ಕಿಯೊಬ್ಬರು ತನ್ನ ತಂಗಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆ ಮಾಡಿಕೊಂಡ 28 ವರ್ಷದ ರಶ್ಮಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮೂಲತಃ ಕೋಲಾರದವರಾಗಿದ್ದು, ಅದೇ ಊರಿನ ಸತೀಶ್ ಎಂಬುವರನ್ನು ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಒಂದು ವರ್ಷದ ಮಗು ಕೂಡ ಇದೆ. ಈ ದಂಪತಿ ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸಫೈರ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಮಹದೇವಪುರದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಅವರಿಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ರಶ್ಮಿ ರಾತ್ರಿ ತಾಯಿ ಮನೆಗೆ ಹೋಗಿದ್ದರು. ಮನೆಗೆ ವಾಪಸ್ ಬರುವಾಗ ಮಗುವನ್ನು ಅಲ್ಲೇ ಬಿಟ್ಟು ಬಂದಿದ್ದರು. ಆದರೆ ಅಲ್ಲಿಂದ ಬಂದು ಅಪಾರ್ಟ್‍ಮೆಂಟ್‍ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮತ್ತು ಅತ್ತೆಯ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಶ್ಮಿ ತಾಯಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಳಿಯ ಮತ್ತು ಅತ್ತೆ ಸೇರಿಕೊಂಡು ಸಣ್ಣ ಪುಟ್ಟ ವಿಷಯಗಳಿಗೂ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಅವರಿಂದ ಹಿಂಸೆ ಅನುಭವಿಸುತ್ತಿರುವುದಾಗಿ ನನ್ನ ಜೊತೆ ಹೇಳಿಕೊಂಡಿದ್ದಳು. ಶನಿವಾರ ರಾತ್ರಿ ಕೂಡ ತುಂಬಾ ಬೇಸರದಿಂದ ಪತಿಯ ವರ್ತನೆಯನ್ನು ಹೇಳಿಕೊಂಡಿದ್ದಳು. ಆದರೆ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಶ್ಮಿ ತಾಯಿ ಹೇಳಿದ್ದಾರೆ.
ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು. ತಾಯಿ ಮನೆಗೆ ಹೋಗುತ್ತಿರುವುದಾಗಿ ರಶ್ಮಿ ಹೇಳಿದ್ದಳು. ಆದರೆ ಕೆಲಸದಿಂದ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ನಮ್ಮ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ. ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಎಂದು ಪತಿ ಸತೀಶ್ ಪೊಲೀಸರಿಗೆ ತಿಳಿಸಿದ್ದಾರೆ.
ರಶ್ಮಿ ಆತ್ಮಹತ್ಯೆಗೂ ಮುನ್ನ ಅಮೆರಿಕದಲ್ಲಿದ್ದ ಸಹೋದರಿಗೆ ಕೊನೆಯ ಮೆಸೇಜ್ ಮಾಡಿದ್ದಾರೆ. ನನ್ನ ಪತಿ ಸತೀಶ್ ನೀವಂದುಕೊಂಡಷ್ಟು ಒಳ್ಳೆಯವನಲ್ಲ. ಪತಿ ಮತ್ತು ಅತ್ತೆ ಪ್ರತಿದಿನ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ. ನನ್ನ ಮಗುವನ್ನ ಇವರ ಬಳಿ ಕಳಿಸಬೇಡಿ. ನೀವು ಚೆನ್ನಾಗಿ ನೋಡಿಕೊಳ್ಳಿ ಎಂದು ಸಹೋದರಿಗೆ ಮೆಸೇಜ್ ಮಾಡಿದ್ದಾರೆ. ಸಹೋದರಿ ಮಾಡಿದ ಮೆಸೇಜ್ ನೋಡಿದ ಕೂಡಲೇ ಭಾವ ಸತೀಶ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ಪತಿ ಮನೆಗೆ ಹೋಗುವಷ್ಟರಲ್ಲಿ ರಶ್ಮಿ ನೇಣಿಗೆ ಶರಣಾಗಿದ್ದರು ಎನ್ನಲಾಗಿದೆ.
ಮೃತಳ ತಾಯಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.