-ಮಗನಿಗೆ ಏನಾಗಿದೆಯೆಂದು ನೋಡಲು ತಂದೆಯೂ ರೈಲಿನಿಂದ ಹಾರಿದ್ರು
ಬೆಂಗಳೂರು: ಕೇರಳದಿಂದ ತನ್ನನ್ನು ನೋಡಲು ನಗರಕ್ಕೆ ಬಂದಿದ್ದ ತಂದೆ-ತಾಯಿಯನ್ನು ಕಳುಹಿಸಲೆಂದು ಹೋದ ಟೆಕ್ಕಿ, ಚಲಿಸುತ್ತಿರುವ ರೈಲಿನಿಂದ ಹಾರಿದ ಪರಿಣಾಮ ಮೃತಪಟ್ಟ ಮನಕಲಕುವ ಘಟನೆಯೊಂದು ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ಈ ಘಟನೆ ಪೂರ್ವ ಬೆಂಗಳೂರಿನ ಕಾರ್ಮೆಲರಂ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತ ದುರ್ದೈವಿ ಟೆಕ್ಕಿಯನ್ನು 26 ವರ್ಷದ ವಿಕ್ರಮ್ ವಿಜಯನ್ ಎಂದು ಗುರುತಿಸಲಾಗಿದೆ. ಇವರು ಪ್ರತಿಷ್ಠಿತ ವಿಪ್ರೊ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಘಟನೆಯಲ್ಲಿ ತಂದೆ 65 ವರ್ಷದ ವಿಜಯನ್ ಚಕ್ಕಿಂಗಲ್ ಅವರಿಗೂ ಗಾಯಳಾಗಿವೆ.
Advertisement
ಘಟನೆಯೇನು..?
ವಿಕ್ರಮ್ ಎಚ್ ಎಸ್ ಆರ್ ಲೇಔಟ್ ನಲ್ಲಿ ನೆಲೆಸಿದ್ದು, ಪ್ರತಿಷ್ಠಿತ ವಿಪ್ರೊ ಕಂಪೆನಿಯ ಟೆಕ್ಕಿಯಾಗಿದ್ದಾರೆ. ಇವರ ತಂದೆ ವಿಜಯನ್ ಚಕ್ಕಿಂಗಲ್ ನಿವೃತ್ತ ಟೆಕ್ನಿಶಿಯನ್ ಆಗಿದ್ದರು. ಇವರು ಮೂಲತಃ ಕೇರಳದ ಪಾಲಕಾಡ್ ಜಿಲ್ಲೆಯ ಕಂಜಿಕೋಡ್ ನಿವಾಸಿಯಾಗಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡ ಇವರು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ವಿಜಯನ್ ಹಾಗೂ ಪತ್ನಿ ಉದಯ ಕುಮಾರಿ ಕೆಲ ದಿನಗಳ ಹಿಂದೆ ಮಗನ ಜೊತೆ ಇರಲು ಬಂದಿದ್ದರು. ಬಳಿಕ ಸೋಮವಾರ ಯಶವಂತಪುರ-ಕಣ್ಣೂರು ರೈಲಿನಲ್ಲಿ ಮತ್ತೆ ತಮ್ಮ ಊರು ಪಾಲಕಾಡ್ ಗೆ ತೆರಳಲೆಂದು ಮಗ ವಿಕ್ರಮ್ ಜೊತೆ ಕಾರ್ಮೆಲರಂ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಅಂತೆಯೇ ರಾತ್ರಿ 8.56ರ ಸುಮಾರಿಗೆ ರೈಲು ಫ್ಲಾಟ್ ಫಾರಂ ನಂಬರ್ 1ಕ್ಕೆ ಬಂದು ಕೆಲ ನಿಮಿಷ ನಿಂತಿತ್ತು.
Advertisement
ಹೀಗಾಗಿ ರೈಲು ನಿಂತಿದೆಯೆಂದು ವಿಕ್ರಮ್ ಕೂಡ ತನ್ನ ಹೆತ್ತವರ ಲಗೇಜ್ ಹಿಡಿದುಕೊಂಡು ತಾವು ಬುಕ್ ಮಾಡಿದ್ದ ಸೀಟ್ ಹುಡುಕಿಕೊಡಲೆಂದು ರೈಲಿಗೆ ಹತ್ತಿದ್ದಾರೆ. ಅಂತೆಯೇ ಎಸಿ ಕಂಪಾರ್ಟ್ ಮೆಂಟ್ ನಲ್ಲಿ ತಾವು ರಿಸರ್ವ್ ಮಾಡಿದ ಸೀಟಿಗೆ ತೆರಳಿ ಅಪ್ಪ-ಅಮ್ಮನ ಲಗೇಜ್ ಇಟ್ಟು, ಅವರಿಗೆ ಸೀಟ್ ಇಲ್ಲಿದೆ ಅಂತ ಹೇಳಿದ್ದಾರೆ. ಅದಾಗಲೇ ರೈಲು ಚಲಿಸುತ್ತಿರುವುದು ವಿಕ್ರಮ್ ಗಮನಕ್ಕೆ ಬಂದಿದೆ. ಕೂಡಲೇ ಹೆತ್ತವರಿಗೆ ಹ್ಯಾಪಿ ಜರ್ನಿ ಅಂತ ವಿಶ್ ಮಾಡಿ ರೈಲಿನಿಂದ ಕೆಳಗಿಳಿಯಲು ಓಡಿದ್ದಾರೆ.
ರೈಲು ಚಲಿಸುತ್ತಿತ್ತು. ಹೀಗಾಗಿ ವಿಕ್ರಮ್ ರೈಲು ಚಲಿಸುತ್ತಿದ್ದ ವಿರುದ್ಧ ದಿಕ್ಕಿನಿಂದ ಹಾರಿದ್ದಾರೆ. ಪರಿಣಾಮ ಕಂಟ್ರೋಲ್ ತಪ್ಪಿ ಫ್ಲಾಟ್ ಫಾರಂ ಹಾಗೂ ರೈಲ್ವೇ ಟ್ರ್ಯಾಕ್ ಮಧ್ಯೆ ಬಿದ್ದಿದ್ದು, ಚಕ್ರಗಳ ನಡುವೆ ಸಿಲುಕಿದ್ದಾರೆ. ರೈಲು ಚಲಿಸುತ್ತಿದ್ದುದರಿಂದ ಟೆಕ್ಕಿಯ ಕಾಲು, ಕೈ ಹಾಗೂ ತಲೆ ಬೇರೆಬೇರೆಯಾಗಿವೆ. ಮಗ ಹಾರಿದ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ವಿಕ್ರಮ್ ತಂದೆ ವಿಜಯನ್, ಮಗನಿಗೆ ಏನಾಗಿದೆ ಅಂತ ತಿಳಿದುಕೊಳ್ಳಲು ತಾವು ಕೂಡ ರೈಲಿನಿಂದ ಹಾರಿದ್ದಾರೆ. ಹೀಗಾಗಿ ಅವರಿಗೂ ಗಾಯಗಳಾಗಿವೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಕಂಡ ಉದಯಕುಮಾರಿ ಇತರ ರೈಲು ಪ್ರಯಾಣಿಕರಲ್ಲಿ ರೈಲನ್ನು ನಿಲ್ಲಿಸುವಂತೆ ಬೇಡಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರು ರೈಲಿನ ಚೈನ್ ಎಳೆದು ನಿಲ್ಲಿಸಿದ್ದಾರೆ. ಕೂಡಲೇ ಗಾಯಗೊಂಡಿರುವ ವಿಜಯನ್ ಅವರನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಮೃತ ವಿಕ್ರಮ್ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಂಗಳವಾರ ಬೆಳಗ್ಗೆ ವಿಕ್ರಮ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಸದ್ಯ ಪ್ರಕರಣ ಸಂಬಂಧ ಕಾರ್ಮೆಲರಂ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಚಂದನ್ ಕುಮಾರ್ ಅವರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv