ಹುಬ್ಬಳ್ಳಿ: ಸಿಡ್ನಿ ಮೂಲದ ಟೆಕ್ಕಿಯೊಬ್ಬ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಆಗಲೇಬೇಕೆಂದು ಆಕೆಯ ಮನೆ ಮುಂದೆ ಕಳೆದ ನಾಲ್ಕು ದಿನಗಳಿಂದ ಧರಣಿಗೆ ಕುಳಿತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಿಡ್ನಿಯ ಖಾಯಂ ನಿವಾಸಿಯಾಗಿರುವ ಆಂಧ್ರದ ಕಡಪ ಮೂಲದ ಚಕ್ರವರ್ತಿ ಮ್ಯಾಟ್ರಿಮೋನಿಯಲ್ಲಿ ಹುಬ್ಬಳ್ಳಿಯ ಶ್ವೇತಾಗೆ ಮನಸೋತಿದ್ದನು. ಇಷ್ಟಪಟ್ಟಿದ್ದ ಹುಡುಗಿಯನ್ನು ಮದುವೆಯಾಗಲು ಸಿಡ್ನಿಯಿಂದ ದೇಶಕ್ಕೆ ಆಗಮಿಸಿ ಹುಡುಗಿಯ ಮನೆಯವರೊಂದಿಗೆ ಮಾತುಕತೆ ಸಹ ನಡೆಸಿದ್ದನು.
ಮೊದ ಮೊದಲು ಹುಡುಗಿಯ ಮನೆಯವರು ಸಹ ಮಾತುಕತೆ ನಡೆಸಿ ಮದುವೆಗೆ ಒಪ್ಪಿದ್ದರು. ನಂತರ ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣ ಹುಡುಗಿಯ ಮನೆಯವರು ಈ ಮದುವೆಗೆ ನಿರಾಕರಿಸಿದ್ದರು. ಆದರೆ ಸಿಡ್ನಿಯಿಂದ ಬೆಂಗಳೂರಿಗೆ ಆಗಮಿಸಿ ಹುಡುಗಿಯ ಜೊತೆ ಮಾತುಕತೆ ನಡೆಸಿದ್ದ ಚಕ್ರವರ್ತಿ ಇದೀಗ ಶ್ವೇತಾಳೊಂದಿಗೆ ಮದುವೆ ಆಗಲೇಬೇಕೆಂದು ಹಠ ಹಿಡಿದು ಆಕೆಯ ಮನೆ ಮುಂದೆ ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಧರಣಿ ನಡೆಸುತ್ತಿದ್ದಾನೆ.
ಪಾಗಲ್ ಪ್ರೇಮಿಯ ಕಾಟ ತಡೆಲಾಗದೇ ಹುಡುಗಿಯ ಮನೆಯವರು ಮನೆ ಬಿಟ್ಟು ಬೇರೆಡೆ ತೆರಳಿದ್ದಾರೆ. ಹೀಗಾಗಿ ಹುಡುಗಿಯ ಮನೆ ಮುಂದೆ ಧರಣಿ ಕುಳಿತಿರುವ ಸಿಡ್ನಿ ಮೂಲದ ಟೆಕ್ಕಿ ಮನವೊಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಎಷ್ಟೇ ಮನವೊಲಿಸಿದರೂ ಹುಡುಗಿಯೂ ಮದುವೆಗೆ ನಿರಾಕರಿಸುತ್ತಿದ್ದಾಳೆ. ಇತ್ತ ಚಕ್ರವರ್ತಿ ನನಗೆ ಅವಳೇ ಬೇಕು. ಅವಳೊಂದಿಗೆ ಮದುವೆ ಆಗಲೇಬೇಕು ಎಂದು ಪೊಲೀಸರಿಗೆ ಪತ್ರ ಬರೆದುಕೊಟ್ಟಿದ್ದಾನೆ.