-ಸಿಎಂ ಯೋಗಿಯ ಸಹಾಯ ಕೇಳಿದ ಮಹಿಳೆ
ಲಕ್ನೋ: ಚಲಿಸುತ್ತಿದ್ದ ರೈಲಿನಲ್ಲಿ (Train) ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ (Triple Talaq) ನೀಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.
ಮೊಹಮ್ಮದ್ ಅರ್ಷದ್ (28) ಎಂಬಾತ ತನ್ನ ಪತ್ನಿ ಅಫ್ಸಾನಾ (26) ಜೊತೆ ಪ್ರಯಾಣಿಸುತ್ತಿದ್ದಾಗ ತಲಾಕ್ ನೀಡಿದ್ದಾನೆ. ಬಳಿಕ ಆಕೆಗೆ ಥಳಿಸಿ, ರೈಲು ಝಾನ್ಸಿ ಜಂಕ್ಷನ್‍ಗೆ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ. ಏಪ್ರಿಲ್ 29 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅರ್ಷದ್, ಭೋಪಾಲ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ (Techie) ಕೆಲಸ ಮಾಡುತ್ತಿದ್ದ. ಅಫ್ಸಾನಾ ಹಾಗೂ ಅರ್ಷದ್ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಪರಿಚಯವಾಗಿದ್ದು, ಈ ವರ್ಷ ಜನವರಿ 12 ರಂದು ಇಬ್ಬರು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ಕಳೆದ ವಾರ ದಂಪತಿ ಪುಖ್ರಾಯನ್‍ನಲ್ಲಿರುವ ಅರ್ಷದ್‍ನ ಸಂಬಂಧಿಯೊಬ್ಬರ ಮನೆಗೆ ಮನೆಗೆ ಭೇಟಿ ನೀಡಿದಾಗ, ಆತನಿಗೆ ಈಗಾಗಲೇ ಮದುವೆಯಾಗಿರುವುದು ತಿಳಿದು ಆಕೆ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆಯಾಗಿದೆ. ಮರಳಿ ಬರುವಾಗ ಇದೇ ವಿಚಾರಕ್ಕೆ ಆತ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಲಾಕ್ ನೀಡಿ ಮಹಿಳೆಗೆ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಅಫ್ಸಾನಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಸಹಾಯ ಕೇಳಿದ್ದು, ಮಹಿಳೆಯರಿಗೆ ವಂಚಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.