ಡಾಲಿ ಧನಂಜಯ್ ನಟನೆಯ ‘ಕೋಟಿ’ ಸಿನಿಮಾದ ಟೀಸರ್ ರಿಲೀಸ್

Public TV
3 Min Read
Kotee 2

ನ್ನಡ ಸಿನಿಮಾ ಮಾರುಕಟ್ಟೆಗೆ ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಕೋಟಿ (Kotee) ಸಿನಿಮಾ ಮೂಲಕ ಕಾಲಿಟ್ಟಿದೆ. ಕನ್ನಡದ ಅತಿ ಪ್ರತಿಭಾವಂತ ನಟ ಧನಂಜಯ ಈ ಸಿನಿಮಾ ನಾಯಕರಾಗಿದ್ದು ಪರಮ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಇದರ ಟೀಸರ್ (Teaser)  ಬಿಡುಗಡೆ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡೆಯಿತು. ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ 370, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ಕೊಟ್ಟಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

Kotee 1 1

ನಟಿಸುವ ಬದಲು ಪಾತ್ರವೇ ಆಗಿಬಿಡುವ ಧನಂಜಯ (Dhananjay) ಕನ್ನಡದ ಸೂಕ್ಷ್ಮ ನಟ.  ತಮ್ಮ ಹೊಸ ಸಿನಿಮಾ ʼಕೋಟಿʼಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿರುವ ಅವರು ಈ ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆʼ ಎಂದು ಪಾತ್ರದ ಬಗ್ಗೆ ಮಾತಾಡುತ್ತಾರೆ ಧನಂಜಯ.

Kotee 4

ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ.  ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್ (Param). ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

Kotee

‘ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆʼ ಎನ್ನುತ್ತಾರೆ ಜಿಯೋ ಸ್ಟುಡಿಯೋಸ್ ನ ಕನ್ನಡದ ಮುಖ್ಯಸ್ಥರೂ ಆಗಿರುವ ಪರಮ್.

Kotee 3

ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ. ‘ಸಪ್ತ ಸಾಗರದಾಚೆʼ ಸಿನಿಮಾದ ನಂತರ ಜನರಿಗೆ ಹೆಚ್ಚು ಪರಿಚಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದಾರೆ. ಕೋಟಿ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ.

Kotee 5

ವಾಸುಕಿ ವೈಭವ್  ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಐದು ಹಾಡುಗಳಿವೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಒಂದು ಹಾಡನ್ನು ಸ್ವತಃ ವಾಸುಕಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ‘ಕೋಟಿ’ ಸಿನಿಮಾದ ಮುಖ್ಯ ಭಾಗವಾಗಿದ್ದು, ಆ ಹೊಣೆಯನ್ನು ‘777ಚಾರ್ಲಿ’ ಮತ್ತು ʼ೨೦೧೮ʼ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ನೊಬಿನ್ ಪೌಲ್ ಹೊತ್ತಿದ್ದಾರೆ. ಅವರು ಸಂಗೀತ ಸಂಯೋಜನೆಯ ಮಲಯಾಳಮ್ ಚಿತ್ರ ʼ2018ʼ ಆಸ್ಕರ್ ಪ್ರಶಸ್ತಿಗೆ ಈ ವರ್ಷ ಭಾರತದ ಅಧಿಕೃತ ಆಯ್ಕೆ ಆಗಿತ್ತು.

Moksha Kushal 4

ಇದರ ಸಂಕಲನದ ಜವಾಬ್ದಾರಿಯನ್ನು ಹೊತ್ತಿರುವುದು ಕನ್ನಡದ ಪ್ರತಿಭಾವಂತ ಯುವ ಸಂಕಲನಕಾರ, ಛಾಯಾಗ್ರಾಹಕ ಪ್ರತೀಕ್ ಶೆಟ್ಟಿ. ಈಗಾಗಲೇ ʼಕಾಂತಾರʼ ʼ೭೭೭ಚಾರ್ಲಿʼ ಸಂಕಲನದ ಮೂಲಕ ಹೆಸರು ಗಳಿಸಿರುವ ಇವರು “ಗಂಧದ ಗುಡಿʼ ಸಾಕ್ಷ್ಯ ಚಿತ್ರಕ್ಕೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಟೆಲಿವಿಷನ್ ಪ್ರಯಾಣದಲ್ಲಿ ಪರಮ್ ಅವರಿಗೆ ಜೋಡಿಯಾಗಿದ್ದ ಅರುಣ್ ಬ್ರಹ್ಮನ್ ‘ಕೋಟಿ’ ಸಿನಿಮಾದ ಸಿನಿಮಾಟೋಗ್ರಾಫರ್ ಆಗಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೇಂಕಟೇಶ್ ಬೇರೆ ಬೇರೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೋಟಿ ಸಿನಿಮಾದ ಟೀಸರ್ ಬಿಡುಗಡೆಯಾಗಿ ಈಗ ಕುತೂಹಲ ಹೆಚ್ಚಾಗಿದೆ. ಸಹಜವಾಗಿ ಇದ್ದುಬಿಡುವುದರ ಮೂಲಕ ಹೇಗೆ ಪಾತ್ರವೇ ಆಗಿಬಿಡಬಹುದು ಎನ್ನುವುದರ ಝಲಕ್ಕನ್ನು ಧನಂಜಯ ತೋರಿಸಿದ್ದರೆ ರಮೇಶ್ ಇಂದಿರಾ ಒಬ್ಬ ಪ್ರಭಾವಶಾಲಿ ಖಳನಟ ಆಗುವ ಭರವಸೆ ಹುಟ್ಟಿಸಿದ್ದಾರೆ. ಜೂನ್ 14 ರಂದು ಕೋಟಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Share This Article