ಬಿಗ್ ಮನೆ ಆಟ ಜೋರಾಗಿದೆ. 70 ದಿನದತ್ತ ದಾಪುಗಾಲು ಇಡ್ತಿರೋ ಬಿಗ್ ಬಾಸ್ (Bigg Boss Kannada) ಮನೆ ಆಟ ಸಾಕಷ್ಟು ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದಿನ ಸೀಸನ್‌ಗಳಿಗಿಂತ ಈಗೀನ ಬಿಗ್ ಬಾಸ್ 10 ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಳೆಯ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ಅದರಲ್ಲೂ ಈ ಸೀಸನ್‌ನಲ್ಲಿ ಜಗಳದಿಂದಲೇ ಹೆಚ್ಚೆಚ್ಚು ಸುದ್ದಿಯಾಗುತ್ತಾ ಪ್ರೇಕ್ಷಕರನ್ನ ಸೆಳೆಯುತ್ತಿದೆ.
ಈಗ ಇದೆಲ್ಲದರ ನಡುವೆ ಮತ್ತೆ ಬಿಗ್ ಮನೆಯಲ್ಲಿ ಹೊಸದೊಂದು ಗಲಾಟೆ ಶುರುವಾಗಿದೆ. ಅನ್ನಕ್ಕಾಗಿ ಸಂಗೀತಾ- ನಮ್ರತಾ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಸಿಡಿದೆದ್ದ ಸಂಗೀತಾ ಮುಂದೆ ನಮ್ರತಾ ಗಳಗಳನೇ ಅತ್ತಿದ್ದಾರೆ. ಹೌದು ಈ ವಾರ ಟಾಸ್ಕ್ ನಲ್ಲಿ ಪೂರೈಸಿದ ಮೇಲೆ ಎಂದಿನಂತೆ ಲಕ್ಷುರಿ ಬಜೆಟ್ ಆರಂಭವಾಗಿದೆ. ಕಳೆದ ಬಾರಿ ಸಂಗೀತಾ (Sangeetha) ತಿನ್ನುವ ಪನ್ನೀರ್ ಮಹತ್ವ ಕೊಡಲಿಲ್ಲ. ಲಿಸ್ಟ್ ನಲ್ಲಿ ಇರಲಿಲ್ಲ ಎಂದು ಜಗಳವಾಗಿತ್ತು. ಈ ಬಾರಿ ಬ್ರೋನ್ ರೈಸ್ ಯಾಕೆ ಬಂತು ಎಂದೂ ಜಗಳವಾಗಿದೆ.
ಮನೆಗೆ ಏನೆಲ್ಲಾ ಬೇಕು ಎಂದು ನಮ್ರತಾ ಪಟ್ಟಿ ಮಾಡಿ ಲಕ್ಷುರಿ ಬಜೆಟ್ ಫೈನಲ್ ಮಾಡಿದ್ದಾರೆ. ಪನ್ನೀರ್‌ಗೆ ಆಧ್ಯತೆ ನೀಡಿದ್ದಾರೆ. ಆದರೆ ಬ್ರೋನ್ ರೈಸ್ ಬೇಕು ಎಂದು ಹೇಳಿರೋದು ಸಂಗೀತಾ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟು ದಿನ ಲಿಸ್ಟ್ನಲ್ಲಿ ಇಲ್ಲದೇ ಇರೋದು ಈಗ ಯಾಕೆ ಬಂತು ಎಂದು ನಮ್ರತಾಗೆ ಸಂಗೀತಾ ಕುಟುಕಿದ್ದಾರೆ.
ಅದಕ್ಕೆ ನಮ್ರತಾ (Namrata) ಕೂಡ, ನಿಮಗೆ ಹೇಗೆ ಪನ್ನೀರ್‌ಗೆ ಹೇಗೆ ಆದ್ಯತೆ ಕೊಟ್ಟೆವೋ ಹಾಗೆಯೇ ಬ್ರೋನ್ ರೈಸ್ ಬೇಕು ಎನ್ನುವುದು ಹಲವರ ಬೇಡಿಕೆಯಾಗಿತ್ತು ಹಾಗಾಗಿ ಬರೆದೆ ಎಂದು ಖಡಕ್ ಆಗಿ ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ನಮ್ರತಾ ಕಣ್ಣೀರು ಹಾಕಿದ್ದಾರೆ. ದೀದಿ ಪರದಾಟ ನೋಡಲಾಗದೇ ಡ್ರೋನ್ ಪ್ರತಾಪ್ ಹೋಗಿ ಸಮಾಧಾನ ಮಾಡಿ ಸಂತೈಸಿದ್ದಾರೆ. ಒಟ್ನಲ್ಲಿ ಸಂಗೀತಾ- ನಮ್ರತಾ ವಾಕ್ಸಮರ ಮನೆಮಂದಿಯ ನಿದ್ದೆ ಕೆಡಿಸಿರೋದಂತೂ ನಿಜ.