ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

Public TV
3 Min Read
Team India Mumbai 2

– ವಿಶ್ವವಿಜೇತರನ್ನು ನೋಡಲು ಇರುವೆಗಳಂತೆ ಮುತ್ತಿಕೊಂಡ ಫ್ಯಾನ್ಸ್‌
– ಸಮುದ್ರವನ್ನೂ ಮೀರಿಸಿದ ಅಭಿಮಾನಿಗಳ ಸಾಗರ!

ಮುಂಬೈ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಗೆದ್ದು ಐಸಿಸಿ ಪ್ರಶಸ್ತಿಯ ಬರ ನೀಗಿಸಿದ ʻವಿಶ್ವʼ ವಿಜೇತ ಟೀಂ ಇಂಡಿಯಾದ (Team India) ವಿಜಯಯಾತ್ರೆ ಶುರುವಾಗಿದೆ. ಮುಂಬೈ ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಅದ್ಧೂರಿ ಯಾತ್ರೆ ಆರಂಭವಾಗಿದೆ. ಇಲ್ಲಿಂದ ಸುಮಾರು 2 ಕಿಮೀ ವಿಜಯೋತ್ಸವ ಯಾತ್ರೆ ನಡೆಯಲಿದ್ದು, ನಂತರ ವಾಂಖೆಡೆ ಮೈದಾನ ತಲುಪಲಿದೆ.

Team India Mumbai 1

ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್ಪ್ರೀತ್‌ ಬುಮ್ರಾ ಸೇರಿದಂತೆ ವಿಶ್ವಕಪ್‌ ವಿಜೇತ ತಂಡ ತೆರೆದ ಬಸ್‌ನಲ್ಲಿ ಹೊರಟಿದೆ. ಪಕ್ಕದಲ್ಲೇ ಇದ್ದ ಸಮುದ್ರವನ್ನೂ ನಾಚಿಸುವಂತೆ ನೆರೆದಿದ್ದ ಅಭಿಮಾನಿಗಳ ಸಾಗರ ಕಂಡು ಆಟಗಾರರು ಹರ್ಷಗೊಂಡಿದ್ದಾರೆ. ಮೈಮೇಲೆ ರಾಷ್ಟ್ರಧ್ವಜ ಹೊದ್ದು, ಕೈಯಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಾ ಕೈಬೀಸಿ ಮುಂದೆ ಸಾಗುತ್ತಿದ್ದಾರೆ.

ವಿಜಯಯಾತ್ರೆಯಲ್ಲಿ ʻರೋಹಿತ್‌ ಭಾಯ್‌, ಕೊಹ್ಲಿ ಭಾಯ್‌ʼ ಘೋಷಣೆಗಳು ಮೊಳಗಿವೆ. ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳು ಮಳೆಯಲ್ಲೂ ಉತ್ಸಾಹ ಕಳೆದಕೊಳ್ಳದೇ ವಿಶ್ವವೀರರನ್ನ ಸ್ವಾಗತಿಸಿದ್ದಾರೆ. ಸುಮಾರು 2 ಕಿಮೀ ವಿಜಯಯಾತ್ರೆ ತೆರಳಲಿದ್ದು, ನಂತರ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರು ಹಾಗೂ ಬಿಸಿಸಿಐ ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನು ಆಟಗಾರರಿಗೆ ಪ್ರದಾನ ಮಾಡಲಾಗುತ್ತದೆ.

Rohit Sharma 02ವೀ

ಅವಮಾನವಾದ ಜಾಗದಲ್ಲೇ ಸನ್ಮಾನ:
ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆಲುವನ್ನು ಕ್ರಿಕೆಟ್‌ ಜಗತ್ತು ಮರೆಯುವಂತಿಲ್ಲ. ಹೌದು… 2007ರಲ್ಲಿ ಟೀಂ ಇಂಡಿಯಾಕ್ಕೆ ಅತ್ಯಂತ ಪ್ರತಿಷ್ಠೆಯ ಟೂರ್ನಿ ಅದಾಗಿತ್ತು. 2007ರ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್‌ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮೆನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು. ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನದೊಂದಿಗೆ ಟೀಂ ಇಂಡಿಯಾ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಎತ್ತಿ ಹಿಡಿಯಿತು. ಅಂದು ಸಹ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಟೀಂ ಇಂಡಿಯಾವನ್ನು ತವರಿಗೆ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಕಲ್ಲುತೂರಾಟ ನಡೆಸಿದ್ದ ಅಭಿಮಾನಿಗಳು ಧೋನಿ ಬಳಗ ಕಪ್‌ ಎತ್ತಿ ಹಿಡಿಯುತ್ತಿದ್ದಂತೆ ಹೂವಿನ ಮಳೆ ಸುರಿಸಿದ್ದರು. ಇದೀಗ ರೋಹಿತ್‌ ಬಳಗವನ್ನು ಸ್ವಾಗತಿಸಿರುವುದು ಅದೇ ದೃಶ್ಯವನ್ನು ನೆನಪಿಸಿದೆ.

Team India 6

ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್‌:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು.

Team India Mumbai

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

Share This Article