ಮುಂಬೈ: 2019 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದ್ದು, ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ.
ವಿಶ್ವಕಪ್ ಆರಂಭಕ್ಕೆ ಇನ್ನು 50 ದಿನಗಳು ಮಾತ್ರ ಬಾಕಿ ಇದ್ದು, ಬಿಸಿಸಿಐ ಪ್ರಕಟಿಸಿರುವ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದರೆ, ರಿಷಬ್ ಪಂತ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
Advertisement
Advertisement
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಂಡವನ್ನು ಪ್ರಕಟಿಸಿದ್ದು, ಇದಕ್ಕೂ ಮುನ್ನ ಆಯ್ಕೆ ಸಮಿತಿ ಸದಸ್ಯರೊಂದಿಗೆ ನಾಯಕ ವಿರಾಟ್ ಕೊಹ್ಲಿ, ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಂದಿಗೆ ಸಭೆ ಏರ್ಪಡಿಸಲಾಗಿತ್ತು.
Advertisement
ಆಯ್ಕೆ ಸಮಿತಿ ತಂಡ ಪ್ರಕಟಿಸುವ ಮುನ್ನವೇ ಕೆಲ ಆಟಗಾರರು ತಂಡದಲ್ಲಿ ತಮ್ಮ ಸ್ಥಾನ ಗಟ್ಟಿ ಪಡಿಸಿಕೊಂಡಿದ್ದರು. ಆದರೆ ರಿಷಬ್ ಪಂತ್, ದಿನೇಶ್ ಕಾರ್ತಿಕ್ ಅವರ ನಡುವೆ 4ನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಅಲ್ಲದೇ ತಂಡದ ಆರಂಭಿಕರೊಂದಿಗೆ 3ನೇ ಸ್ಥಾನದ ಬ್ಯಾಟ್ಸ್ ಮನ್ ಆಯ್ಕೆ ಕೂಡ ಹೆಚ್ಚಿನ ಕುತೂಹಲ ಮೂಡಿಸಿತ್ತು. ಸದ್ಯ ಬಿಸಿಸಿಐ ಪ್ರಕಟಿಸಿರುವ 15 ಆಟಗಾರರ ತಂಡ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ.
Advertisement
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಕೆಎಲ್ ರಾಹುಲ್, ದಿನೇಶ್ ಕಾರ್ತೀಕ್, ರವೀಂದ್ರ ಜಡೇಜಾ, ವಿಜಯ್ ಶಂಕರ್.