ಮುಂಬೈ: ಇಡೀ ಭಾರತ ಅದೊಂದು ಕ್ಷಣಕ್ಕಾಗಿ ಕಾದು ಕುಳಿತಿದೆ. 2005ರಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ತಂಡ ಫೈನಲ್ಸ್‌ಗೆ ಕಾಲಿಟ್ಟಾಗಿನಿಂದಾಗಿ ಈವರೆಗೂ ಅದೊಂದು ಕನಸಾಗಿ ಉಳಿದುಬಿಟ್ಟಿದೆ. ಇದೇ ನಿಟ್ಟಿನಲ್ಲಿ ತಯಾರಾಗಿರುವ ಹೆಮ್ಮೆಯ ಭಾರತದ ಮಹಿಳಾ ಕ್ರಿಕೆಟ್ (India Womens Team) ಮಣಿಗಳು ಈ ಬಾರಿಯ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಗೆದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ.
ದಶಕಗಳ ಕನಸು ನನಸಾಗಲು ಬೇಕಾಗಿರೋದು ಇನ್ನೊಂದೇ ಗೆಲುವು. ಕೋಟ್ಯಂತರ ಅಭಿಮಾನಿಗಳು ಆ ಕ್ಷಣಕ್ಕಾಗಿ ಉಸಿರುಬಿಗಿಹಿಡಿದುಕೊಂಡು ಕಾಯ್ತಿದ್ದಾರೆ. ಚೊಚ್ಚಲ ವಿಶ್ವಕಪ್ ಕಿರೀಟ ಯಾರಿಗೆ? ಎಂಬ ಪ್ರಶ್ನೆಗೆ ಕೌಂಟ್‌ಡೌನ್ ಶುರುವಾಗಿದೆ. ಎಂಟು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್‌ಗೆ ತಲುಪಿದೆ. ಇಂದು (ನ.2) ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಭಾರತ ಸೆಣಸಾಡಲಿದೆ. 2017ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತೀಯ ತಂಡವು ಇಂದು ನಡೆಯಲಿರುವ ಮತ್ತೊಂದು ವಿಶ್ವ ಯುದ್ಧಕ್ಕೆ ಭರ್ಜರಿ ತಯಾರಿ ನಡೆಸಿದೆ.ಇದನ್ನೂ ಓದಿ: Women’s World Cup | ವಿಶ್ವಕಪ್ ಗೆದ್ದರೆ ಭಾರತ ಮಹಿಳಾ ತಂಡಕ್ಕೂ 125 ಕೋಟಿ ಬಹುಮಾನ?
ಲೀಗ್ ಹಂತದಲ್ಲಿ ಏಳು ಬೀಳು ಕಂಡು, ಸೆಮಿಸ್‌ನಲ್ಲಿ ಬೆಟ್ಟದಂತಹ ಸವಾಲನ್ನು ಗೆದ್ದ ಹುಮ್ಮಸ್ಸಿನೊಂದಿಗೆ 2025ರ ಫೈನಲ್ ಪ್ರವೇಶ ಮಾಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡ, ಇಂದು ಕೊನೆಯ ಸವಾಲನ್ನ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿ ನಿಂತಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವಿನ ಹಾರ ಹಾಕಿಕೊಳ್ಳಲು ಭಾರತದ ವನಿತೆಯರು ರೆಡಿಯಾಗಿ ನಿಂತಿದ್ದಾರೆ. ಈಗಾಗಲೇ ಈ ಮೈದಾನದಲ್ಲಿ ಟೀಂ ಇಂಡಿಯಾ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ್ದ ದಾಖಲೆಯ ರನ್ ಚೇಸ್‌ನೊಂದಿಗೆ ಫೈನಲ್ ತಲುಪಿತು.
ಹೌದು, ಕಪಿಲ್ ದೇವ್ ನಾಯಕತ್ವದ ಭಾರತ ತಂಡವು 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಅಂತಹದೊಂದು ಐತಿಹಾಸಿಕ ಸಾಧನೆಯನ್ನು ಮಾಡಲು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ತುದಿಗಾಲಿನಲ್ಲಿ ನಿಂತಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಆದ್ದರಿಂದ ಲಾರಾ ವೊಲ್ವಾರ್ಟ್ ಬಳಗವೂ ಚಾರಿತ್ರಿಕ ಸಾಧನೆ ಮಾಡುವತ್ತ ಚಿತ್ತ ನೆಟ್ಟಿದೆ. ಅದರಿಂದಾಗಿಯೇ 13ನೇ ವಿಶ್ವಕಪ್ ಫೈನಲ್ ತೀವ್ರ ಕುತೂಹಲ ಕೆರಳಿಸಿದೆ.
ಅತಿಥೇಯ ಭಾರತ ತಂಡವೇ ಇಂದಿನ ಫೇವರೇಟ್. ಸೆಮಿಸ್‌ನಲ್ಲಿ ಏಳು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಎದುರಿನ ಭರ್ಜರಿ ಜಯದೊಂದಿಗೆ ಭಾರತ ಆತ್ಮವಿಶ್ವಾಸದಲ್ಲಿ ಫೈನಲ್‌ನಲ್ಲಿ ಕಣಕ್ಕೆ ಇಳಿಯಲಿದೆ. ಫೈನಲ್‌ನಲ್ಲಿ ಭಾರತ ಪರ ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂದಾನ, ಹರ್ಮನ್ ಪ್ರೀತ್ ಕೌರ್, ರೀಚಾ ಘೋಷ್ ಜೊತೆ ಸೆಮಿಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ್ದ ಜೆಮಿಮಾ ರಾಡ್ರಿಗಸ್ ಅವರ ಮೇಲೆ ಹೆಚ್ಚಿನ ಹೊಣೆ ಇದೆ. ಅತ್ತ ಬೌಲಿಂಗ್‌ನಲ್ಲೂ 17 ವಿಕೆಟ್ ಪಡೆದು ಮಿಂಚಿರುವ ಭಾರತದ ಸ್ಪಿನ್ ತಾರೆ ದೀಪ್ತಿ ಶರ್ಮ ಟೀಂ ಇಂಡಿಯಾದ ಬೌಲಿಂಗ್ ಬೆನ್ನಲುಬು, ಜೊತೆಗೆ ಸ್ನೇಹ ರಾಣಾ, ಕ್ರಾಂತಿ ಗೌಡ್, ರೇಣುಕಾಸಿಂಗ್ ಠಾಕೂರ್, ಶ್ರೀಚರಣಿ, ಫಾರ್ಮ್‌ಗೆ ಬಂದ್ರೆ ಸೌತ್ ಆಫ್ರಿಕಾಗೆ ಸಂಕಷ್ಟ ಪಕ್ಕ. ಇತ್ತ ಸೌತ್ ಆಫ್ರಿಕಾ ಕೂಡ ಮೊದಲ ಟ್ರೋಫಿ ನಿರೀಕ್ಷೆಯಲ್ಲಿದ್ದು, ಇಂಗ್ಲೆಂಡ್ ವಿರುದ್ಧ ಸೆಮಿಸ್ ಜಯಿಸಿರುವ ಆಫ್ರಿಕಾ ಕೂಡ ಉತ್ಸಾಹದಲ್ಲೇ ಇದ್ದು, ಟ್ರೋಫಿ ನಿರೀಕ್ಷೆಯಲ್ಲಿದೆ.
ಈ ಮಧ್ಯೆ ಈಗಾಗಲೇ ಬಿಸಿಸಿಐ ಕೂಡ ಮಹತ್ವದ ಘೋಷಣೆ ಮಾಡಿದ್ದು, ಟೀಂ ಇಂಡಿಯಾ ಮಹಿಳಾ ತಂಡ ಜಯಿಸಿದ್ರೆ 125 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ತಿಳಿಸಿದೆ. 2024ರ ಪುರುಷರ ಟಿ20 ವಿಶ್ವಕಪ್‌ನ್ನ ಭಾರತ ಜಯಿಸಿದ್ದಾಗ ಪುರುಷ ತಂಡಕ್ಕೂ 125 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿತ್ತು. ಸದ್ಯ ಮಹಿಳಾ ತಂಡಕ್ಕೂ ಬಹುಮಾನದ ಘೋಷಣೆ ಮಾಡಿದ್ದು, ಇದು ಮಹಿಳಾ ಮತ್ತು ಪುರುಷ ಕ್ರಿಕೆಟ್‌ನ ನಡುವಿನ ಸಮಾನತೆಯ ಹಾದಿಯಾಗಲಿದೆ.ಇದನ್ನೂ ಓದಿ: ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!



