ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸಿಮೀತ ಓವರ್ ಸರಣಿಯನ್ನು ಆಡಲಿದೆ. ಫೆ.24 ರಿಂದ ಆರಂಭವಾಗಲಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ.
ಕೊಹ್ಲಿ ನಾಯಕತ್ವದ ತಂಡ ತವರಿನಲ್ಲಿ ಈ ಬಾರಿಯೂ ಕೂಡ ಕಠಿಣ ಸವಾಲು ನೀಡಲು ಸಿದ್ಧತೆ ನಡೆಸಿದೆ. ಟೀಂ ಇಂಡಿಯಾ ಇದುವರೆಗೂ ಆಸೀಸ್ ವಿರುದ್ಧ 18 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 11ರಲ್ಲಿ ಜಯಗಳಿಸಿದೆ. ಆಸ್ಟ್ರೇಲಿಯಾ 6 ಪಂದ್ಯಗಳಲ್ಲಿ ಜಯ ಪಡೆದಿದ್ದರೆ ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.
ಉಳಿದಂತೆ ಆಸೀಸ್ ವಿರುದ್ಧ ಆಡಿರುವ 7 ಟಿ20 ಸರಣಿಗಳಲ್ಲಿ 3 ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದು ಸಂಭ್ರಮಿಸಿದ್ದು, ಆಸೀಸ್ 1 ಸರಣಿಯಲ್ಲಿ ಮಾತ್ರ ಜಯಗಳಿಸಿದೆ. 3 ಸರಣಿಗಳು ಡ್ರಾ ಆಗಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದು, ಆಸೀಸ್ ವಿರುದ್ಧ ಆಡಿರುವ 14 ಟಿ20 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಸರಣಿಯ ವಿಶ್ರಾಂತಿಯ ಬಳಿಕ ಕೊಹ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಆಸೀಸ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲೂ ಭಾರತ ಪರ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ. 2016 ರಲ್ಲಿ ಆಸೀಸ್ ವಿರುದ್ಧವೇ ಪಾದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ 9 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ. 23 ರನ್ ನೀಡಿ 3 ವಿಕೆಟ್ ಪಡೆದಿರುವುದು ಬುಮ್ರಾರ ಉತ್ತಮ ಪ್ರದರ್ಶನವಾಗಿದೆ. ಉಳಿದಂತೆ ಆರ್ ಅಶ್ವಿನ್ ಆಸೀಸ್ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡಿರುವ ಬೌಲರ್ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv