ವಾಸಿಮ್ ಜಾಫರ್ ತಂಡದಲ್ಲಿ ಧೋನಿಯೇ ಕ್ಯಾಪ್ಟನ್, ಕೀಪರ್

Public TV
2 Min Read
MS DHONI JAFER

ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ತಂಡವೊಂದನ್ನು ರಚಿಸಿದ್ದು, ಅದರಲ್ಲಿ ಎಂ.ಎಸ್.ಧೋನಿ ಅವರೇ ನಾಯಕ, ವಿಕೆಟ್ ಕೀಪರ್ ಆಗಿದ್ದಾರೆ.

ಹೌದು. ವಾಸಿಮ್ ಜಾಫರ್ ತಮ್ಮ ಸಾರ್ವಕಾಲಿಕ ಏಕದಿನ ತಂಡವನ್ನು ಶನಿವಾರ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಯಕ ಸ್ಥಾನ ನೀಡಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಓಪನರ್ ಆಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ನಲ್ಲಿ ಇರಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆಸ್ಟ್ರೇಲಿಯಾಕ್ಕೆ 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ತಂದುಕೊಟ್ಟ ರಿಕಿ ಪಾಂಟಿಂಗ್ ಅವರಿಗೆ ಜಾಫರ್ ತಮ್ಮ ತಂಡದಲ್ಲಿ 12ನೇ ಸ್ಥಾನ ನೀಡಿದ್ದಾರೆ.

dhoni kohli

ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚಡ್ರ್ಸ್ ಜಾಫರ್ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 5ನೇ ಸ್ಥಾನದಲ್ಲಿದ್ದರೆ ಮತ್ತು ಇಂಗ್ಲೆಂಡ್ ಆಲೌರೌಂಡರ್ ಬೆನ್ ಸ್ಟೋಕ್ಸ್ ಆರನೇ ಸ್ಥಾನದಲ್ಲಿದ್ದಾರೆ.

ಒಬ್ಬ ಭಾರತೀಯ ಬೌಲರ್‌ಗೂ ಜಾಫರ್ ತಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರನ್ನು ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೇಗದ ಬೌಲರ್‌ಗಳಲ್ಲಿ ವಿಂಡೀಸ್‍ನ ಜೊವಾನ್ನೆ ಗಾರ್ನರ್, ಪಾಕಿಸ್ತಾನದ ದಂತಕಥೆ ವಾಸಿಮ್ ಅಕ್ರಮ್ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮೆಕ್‍ಗ್ರಾತ್ ಸೇರಿದ್ದಾರೆ.

ಧೋನಿ ನಾಯಕತ್ವ ಯಾಕೆ?:
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಅವರು ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದರು. ಧೋನಿ ಭಾರತದ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ಭಾರತ ತಂಡವು 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇದೇ ಕಾರಣಕ್ಕೆ ಧೋನಿ ಅವರನ್ನೇ ವಾಸಿಮ್ ಜಾಫರ್ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

dhoni 7 jersey

ದೇಶೀಯ ಕ್ರಿಕೆಟ್‍ನಲ್ಲಿ ಜಾಫರ್ ರನ್ ಮಳೆ:
ವಾಸಿಮ್ ಜಾಫರ್ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ರಣಜಿಯಲ್ಲಿ 12,038 ರನ್, ಇರಾನಿ ಟ್ರೋಫಿಯಲ್ಲಿ 1,294 ರನ್ ಮತ್ತು ದುಲೀಪ್ ಟ್ರೋಫಿಯಲ್ಲಿ 2,545 ರನ್ ಗಳಿಸಿದ್ದಾರೆ. ಅವರು ಅತಿ ಹೆಚ್ಚು 156 ರಣಜಿ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. ಜಾಫರ್ ಮುಂಬೈ ತಂಡಕ್ಕೆ ಎರಡು ಬಾರಿ ರಣಜಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಜೊತೆಗೆ ಎರಡು ಬಾರಿ ರಣಜಿ ಪ್ರಶಸ್ತಿಯನ್ನು ಗೆದ್ದ ವಿದರ್ಭ ತಂಡದ ಸದಸ್ಯರಾಗಿದ್ದರು. ವಿಶೇಷವೆಂದರೆ ರಣಜಿಯಲ್ಲಿ 12 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಜಾಫರ್ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *