ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಾಯಕ ಯಾರು ಎಂದು ರಿವೀಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಬಣ್ಣಿಸಿದರೆ, ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ನೆಚ್ಚಿನ ನಾಯಕ ಎಂದು ಹೊಗಳಿದ್ದರು. ಈಗ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅನಿಲ್ ಕುಂಬ್ಳೆ ಅವರನ್ನು ಭಾರತದ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, ”ದಾಖಲೆಗಳ ವಿಷಯದಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ನನ್ನ ಪ್ರಕಾರ ಕನ್ನಡಿಗ ಅನಿಲ್ ಕುಂಬ್ಳೆ ಒಬ್ಬ ಮಹಾನ್ ನಾಯಕ” ಎಂದು ಹೊಗಳಿದ್ದಾರೆ.
Advertisement
Advertisement
”ಅನಿಲ್ ಕುಂಬ್ಳೆ ಅವರು ದೀರ್ಘಕಾಲ ನಾಯಕತ್ವ ವಹಿಸಿದ್ದರೆ ಎಲ್ಲಾ ದಾಖಲೆಗಳನ್ನು ಮುರಿಯಬಹುದಿತ್ತು. ಸೌರವ್ ಗಂಗೂಲಿ ಅವರು ನಿಜವಾಗಿಯೂ ಉತ್ತಮ ನಾಯಕತ್ವ ವಹಿಸಿದ್ದರು. ಆದರೆ ಕುಂಬ್ಳೆ ಅವರು ದೀರ್ಘಕಾಲದವರೆಗೆ ನಾಯಕನಾಗಿರಬೇಕಿತ್ತು. ಕುಂಬ್ಳೆ ನಾಯಕತ್ವದಲ್ಲಿ ನಾನು 6 ಟೆಸ್ಟ್ ಪಂದ್ಯ ಆಡಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಾಯಕರ ಅಡಿಯಲ್ಲಿ ಆಡಿದ್ದೇನೆ. ಅವರಲ್ಲಿ ಕುಂಬ್ಳೆ ಅತ್ಯಂತ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಹೇಳಿದರು.
Advertisement
ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಿದ ಬಳಿಕ ಅನಿಲ್ ಕುಂಬ್ಳೆ 2007ರ ನವೆಂಬರ್ ನಲ್ಲಿ ಭಾರತೀಯ ತಂಡದ ಕ್ಯಾಪ್ಟನ್ ಜವಾಬ್ದಾರಿ ವಹಿಸಿಕೊಂಡರು. ಆಗ ಕುಂಬ್ಳೆ ಕ್ರಿಕೆಟಿಂಗ್ ವೃತ್ತಿಜೀವನದ 17ನೇ ವರ್ಷದಲ್ಲಿದ್ದರು. ಅದೇ ಸಮಯದಲ್ಲಿ, ಗಂಭೀರ್ ಐಪಿಎಲ್‍ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದಿದ್ದಾರೆ.
Advertisement
ಗಂಭೀರ್ ಗಂಗೂಲಿ ನಾಯಕತ್ವದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆನಂತರ ಗಂಭೀರ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಧೋನಿ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದಾರೆ. 2011ರ ವಿಶ್ವಕಪ್ ಫೈನಲ್‍ನಲ್ಲಿ ಅವರು ಶ್ರೀಲಂಕಾ ವಿರುದ್ಧ 97 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು ಟಿ20 ಹಾಗೂ ಏಕದಿನ ವಿಶ್ವಕಪ್‍ಗಳನ್ನು ಗೆದ್ದುಕೊಂಡಿತ್ತು.
ಗೌತಮ್ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4,154 ರನ್, 147 ಏಕದಿನ ಪಂದ್ಯಗಳಲ್ಲಿ 5,238 ರನ್ ಮತ್ತು 37 ಟಿ20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ಗಂಭೀರ್, `ಕೇವಲ ಒಂದು ಜ್ಞಾಪನೆ: ವಿಶ್ವಕಪ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದುಕೊಂಡಿದ್ದರು.
Just a reminder @ESPNcricinfo: #worldcup2011 was won by entire India, entire Indian team & all support staff. High time you hit your obsession for a SIX. pic.twitter.com/WPRPQdfJrV
— Gautam Gambhir (@GautamGambhir) April 2, 2020