ನನ್ನ ದವಡೆ ಒಡೆಯಲು ಜಾನ್ ರೈಟ್ ಕಾರಣ- ರಹಸ್ಯ ಬಿಚ್ಚಿಟ್ಟ ಅನಿಲ್ ಕುಂಬ್ಳೆ

Public TV
2 Min Read
ANIL KUMBLE a

ವೆಲ್ಲಿಂಗ್ಟನ್: ದವಡೆ ಒಡೆದ್ರು ತಲೆಗೆ ದೊಡ್ಡ ಬ್ಯಾಂಡೇಜ್ ಸುತ್ತಿಕೊಂಡು ಅದ್ಬುತ ಬೌಲಿಂಗ್ ಮಾಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಇತಿಹಾಸ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯ ಅನಿಲ್ ಕುಂಬ್ಳೆ ಅವ್ರ ಬದ್ಧತೆಗೆ(ಸಮರ್ಪಣೆ) ಸಾಕ್ಷಿ ಯಾಗಿತ್ತು. ಮೊನ್ನೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಸಾಧನೆ ಹಾಡಿ ಹೊಗಳಿದ್ದರು. ಸದ್ಯ ಅಂದು ತಮ್ಮ ದವಡೆ ಒಡೆತಕ್ಕೆ ಅಸಲಿ ಕಾರಣ ಏನು ಎಂಬ ರಹಸ್ಯವನ್ನ ಸ್ವತಃ ಅನಿಲ್ ಕುಂಬ್ಳೆ ಬಿಚ್ಚಿಟ್ಟಿದ್ದಾರೆ. ಶುಕ್ರವಾರ ನಡೆದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಪಂದ್ಯದ ವೇಳೆ ವೀಕ್ಷಕ ವಿವರಣೆಗೆ ಆಗಮಿಸಿದ ಕುಂಬ್ಳೆ ಆ ಘಟನೆಯ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

ANIL KUMBLE

ಅಂದು ಅನಿಲ್ ಕುಂಬ್ಳೆ ದವಡೆ ಒಡೆದುಕೊಳ್ಳೋಕೆ ಕಾರಣ ಕೋಚ್ ಜಾನ್ ರೈಟ್ ಅಂತೆ. ಆಂಟಿಗೋವಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 2ನೇ ನ್ಯೂ ಬಾಲ್ ತೆಗೆದುಕೊಂಡಿತ್ತು. ಇಂಡಿಯಾದ 6 ನೇ ವಿಕೆಟ್ ಪತನದ ನಂತರ ಕೀಪರ್ ಅಜಯ್ ರಾತ್ರಾ ಬ್ಯಾಟಿಂಗ್‍ಗೆ ಬರಬೇಕಿತ್ತು. ಆದರೆ ಹೊಸ ಬಾಲ್‍ಗೆ ಅಜಯ್ ರಾತ್ರಾ ಅಷ್ಟು ಚೆನ್ನಾಗಿ ಆಡುವುದಿಲ್ಲ. ನೀನು ಚೆನ್ನಾಗಿ ಆಡ್ತೀಯಾ ಹೀಗಾಗಿ ಬ್ಯಾಟಿಂಗ್‍ಗೆ ಹೋಗುವಂತೆ ಜಾನ್ ರೈಟ್ ತಮ್ಮನ್ನು ಕಳುಹಿಸಿದ್ದರು. 2ನೇ ನ್ಯೂ ಬಾಲ್ ನಾನು ಆಡೋವಾಗ ದವಡೆಗೆ ಬಿದ್ದು ಗಾಯವಾಗಿತ್ತು ಎಂದು ವಿವರಿಸಿದ್ದಾರೆ.

ದವಡೆಗೆ ಬಿದ್ದ ಬಳಿಕ ನಾನು ವೈದ್ಯರಿಗೆ ತೋರಿಸಿದೆ. ವೈದ್ಯರು ಏನು ತೊಂದರೆ ಇಲ್ಲವೆಂದು ಹೇಳಿದ್ರು. ಆದರೆ ನನಗೆ ದವಡೆ ಸಮಸ್ಯೆ ಆಗಿದೆ ಎಂಬ ಫೀಲ್ ಆಗ್ತಿತ್ತು. ಹೀಗಾಗಿ 2ನೇ ಓಪಿನಿಯನ್ ತೆಗೆದುಕೊಳ್ಳಲು ಮುಂದಾದೆ. ಆಗ ಮೂಳೆ ಮುರಿದಿರೋದು ಗೊತ್ತಾಯ್ತು. ವೈದ್ಯರು ಮತ್ತೆ ಬೌಲಿಂಗ್ ಮಾಡಬೇಡಿ ಎಂದು ಹೇಳಿದ್ದರು. ಅಂದಿನ ಪಂದ್ಯದಲ್ಲಿ ಭಾರತ 3 ಜನ ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಕುಂಬ್ಳೆ ಗಾಯವಾದ್ದರಿಂದ ಸಚಿನ್ ತೆಂಡೂಲ್ಕರ್ ಮಾತ್ರ ಸ್ಪಿನ್ ಜವಾಬ್ದಾರಿ ವಹಿಸಬೇಕಿತ್ತು. ಇದನ್ನು ಅರಿತು ಪಿಸಿಯೋಥೆರಪಿಯನ್ನು ಪಡೆದು ಬೌಲಿಂಗ್ ಮಾಡುತ್ತೇನೆ ಎಂದು ಕೇಳಿದ್ದೆ. ಆಗ ಫಿಸಿಯೋಥೆರಪಿ ತಮಾಷೆ ಮಾಡಬೇಡಿ ಎಂದಿದ್ದರು. ಆದರೆ ಬೌಲಿಂಗ್ ಮಾಡ್ತೀನಿ ಎಂದು ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ ಎಂದು ಅಂದಿನ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಪಂದ್ಯದ ಸಂದರ್ಭದಲ್ಲಿ ದವಡೆಗೆ ಯಾವುದೇ ತೊಂದರೆಯಾಗದಂತೆ ಎರಡು ಕಡೆ ಗಟ್ಟಿಯಾಗಿ ಬ್ಯಾಂಡೇಜ್ ಕಟ್ಟಿಕೊಂಡಿದ್ದ ಕುಂಬ್ಳೆ ಅವರು 14 ಓವರ್ ಬೌಲಿಂಗ್ ಮಾಡಿ 29 ರನ್ ಮಾತ್ರ ನೀಡಿದ್ದರು. ಅಲ್ಲದೇ ಎದುರಾಳಿ ತಂಡದ ದಿಗ್ಗಜ ಆಟಗಾರ ಲಾರಾ ವಿಕೆಟ್ ಕೂಡಾ ಕಬಳಿಸಿದ್ದರು. ತಮ್ಮ ಬದ್ಧತೆಯ ಮೂಲಕ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *