ಟಿ20 ವಿಶ್ವಕಪ್ ಗೆದ್ದ ಬಳಿಕ ಉಡುಪಿ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಭೇಟಿ

Public TV
2 Min Read
surya kumar yadav visits to udupi temple

– ಪತ್ನಿ ಜೊತೆಗೆ ಆಗಮಿಸಿ ಉಡುಪಿ ದೇವಸ್ಥಾನದಲ್ಲಿ ಸ್ಟಾರ್ ಕ್ರಿಕೆಟರ್ ಪೂಜೆ ಸಲ್ಲಿಕೆ

ಉಡುಪಿ: ಟಿ20 ವಿಶ್ವಕಪ್ ಜಯದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸ್ಟಾರ್ ಕ್ರಿಕೆಟರ್‌ಗೆ ಭವ್ಯ ಸ್ವಾಗತ ಕೋರಲಾಯಿತು.

suryakumar yadav udupi

ನೂತನವಾಗಿ ನಿರ್ಮಾಣವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸೂರ್ಯಕುಮಾರ್ ದಂಪತಿ ಭೇಟಿ ನೀಡಿದರು. ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಕ್ರಿಕೆಟಿಗ ಮಾಹಿತಿ ಪಡೆದುಕೊಂಡರು.

ಇಳಕಲ್ ಶಿಲೆಯಲ್ಲಿ ವಿಶಿಷ್ಟ ದೇವಾಲಯ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಸುಮಾರು 40 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗರ್ಭಗುಡಿ, ಉಚ್ಚಂಗಿ ಗುಡಿ, ಸುತ್ತುಪೌಳಿ ಕಾಮಗಾರಿ ಶೇ.90 ಭಾಗ ಪೂರ್ಣವಾಗಿದೆ. ಮಾರ್ಚ್ 2 ರಂದು ಬ್ರಹ್ಮ ಕಲಶ ಮಹೋತ್ಸವ ಜರುಗಲಿದೆ. ಒಟ್ಟು ಒಂಬತ್ತು ದಿವಸಗಳ ಕಾಲ ಧಾರ್ಮಿಕ ವಿಧಿವಿಧಾನ ನೆರವೇರಲಿದೆ.

ದೇವಸ್ಥಾನಕ್ಕೆ ಭೇಟಿ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಕಾಪು ಮಾರಿಯಮ್ಮನ ದರ್ಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ. ಆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಬರುತ್ತೇನೆ ಎಂದು ತಿಳಿಸಿದರು.

ವರ್ಲ್ಡ್ಕಪ್ ಸೆಲೆಬ್ರೇಶನ್ ಜನಸ್ತೋಮ ನೋಡಿ ಬಹಳ ಖುಷಿಯಾಯಿತು. ಕಾಪುವಿನಲ್ಲಿ ಕೂಡ ಜನರು ಪ್ರೀತಿಯಿಂದ ಬರಮಾಡಿಕೊಂಡದ್ದು ಮನಸ್ಸಿಗೆ ಮುಟ್ಟಿತು. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಖುಷಿ ವ್ಯಕ್ತಪಡಿಸಿದರು.

‘ಕಾಪುದ ಅಮ್ಮ’ (ಕಾಪುವಿನ ತಾಯಿ) ಎಂದು ತುಳುವಿನಲ್ಲಿ ಮಾತನಾಡಿದ ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್, ಟೀಮ್ ಇಂಡಿಯಾ ಕಪ್ತಾನನಾಗಿ ಕಾಪುವಿಗೆ ಬನ್ನಿ ಎಂದು ಅರ್ಚಕರು ಪ್ರಾರ್ಥನೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿ, ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ. ಕರಾವಳಿಯ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿದ್ದೇವೆ ಮನಸ್ಸಿಗೆ ಶಾಂತಿ ಸಿಕ್ಕಿದೆ ಎಂದು ಹೇಳಿದರು.

ಸೂರ್ಯಕುಮಾರ್ ಪತ್ನಿ ದೇವಿಶಾ ಮಾತನಾಡಿ, ಕಾಪು ಮಾರಿಗುಡಿಗೆ ಬಂದು ಮನಸ್ಸಿಗೆ ಖುಷಿಯಾಗಿದೆ. ಐದು ವರ್ಷದ ಹಿಂದೆ ನಾವು ಒಮ್ಮೆ ಉಡುಪಿಗೆ ಬಂದಿದ್ದೆವು. ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಯಾವುದೇ ಟೂರ್ನಿ ಇಲ್ಲದಿದ್ದರೆ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಬರುತ್ತೇವೆ. ಕಾಪು ಮಾರಿಯಮ್ಮನನ್ನು ನೋಡಲು ಪತಿಯನ್ನೂ ಕರೆದುಕೊಂಡು ಬಂದಿದ್ದೇನೆ. ದೇವಿಯಲ್ಲಿ ಏನು ಪ್ರಾರ್ಥಿಸಿದ್ದೇನೆ ಎಂದು ಹೇಳುವುದಿಲ್ಲ. ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪ ಇತ್ತು. ದೇವರಿಗೆ ಸಲ್ಲಿಸಿದ ಕಾಣಿಕೆಯನ್ನು ಹೇಳಿಕೊಳ್ಳಲು ಇಷ್ಟವಿಲ್ಲ. ಭಾರತವನ್ನು ಪ್ರತಿನಿಧಿಸಬೇಕು ಮತ್ತು ವರ್ಲ್ಡ್ ಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟರ್‌ಗಳ ಕನಸು. ಒಂದು ಕನಸು ಸಾಕಾರಗೊಂಡಿದೆ ಎಂಬ ಖುಷಿ ಇದೆ. ಇಂತಹ ಹಲವಾರು ಕನಸುಗಳನ್ನು ಕಂಡು ಮುಂದೆ ಸಾಗಬೇಕಾಗಿದೆ ಎಂದರು.

Share This Article