ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿದರು. ನಾಗಬನದಲ್ಲಿ ತನು ತಂಬಿಲ ಸೇವೆ ನೀಡಿದರು. ಟೀಂ ಇಂಡಿಯಾ ಬಗ್ಗೆ ಕೂಡಾ ಮಾತನಾಡಿದ್ರು.
ಕ್ರಿಕೆಟಿಗೂ ನಾಗಬ್ರಹ್ಮನಿಗೂ ಏನಾದ್ರೂ ಸಂಬಂಧ ಇದ್ಯಾ? ಇಲ್ಲ ಅಂತ ಹೇಳ್ಬೇಡಿ. ವಿಶ್ವದ ನಂಬರ್ ಒನ್ ಟೀಂನ ಕೋಚ್ ರವಿಶಾಸ್ತ್ರಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ.
Advertisement
ಮದುವೆಯಾಗಿ 17 ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿಶಾಸ್ತ್ರಿಗೆ ಸಂತಾನಭಾಗ್ಯ ದಕ್ಕಿತು. ನಾಗದೇವರ ಆಶೀರ್ವಾದವನ್ನು ನೆನೆಯುವ ರವಿಶಾಸ್ತ್ರಿ ಪ್ರತೀ ವರ್ಷ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿಗೆ ಬರುತ್ತಾರೆ. ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾರಿ ಕೂಡಾ ನಾಗಬನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರವಿಶಾಸ್ತ್ರಿ ಸಂಬಂಧಿ, ಆಪ್ತ ಮನೋಹರ ಪ್ರಸಾದ್ ಹೇಳಿದರು.
Advertisement
Advertisement
ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿಂದ ವಲಸೆ ಹೋದ ನಂತರವೂ ಇಲ್ಲಿನ ಕಾರ್ಣಿಕ ತಿಳಿದ ರವಿ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ.
Advertisement
ವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಬನದ ಸೇವೆಯಲ್ಲಿ ನಾನು ಮನಶಾಂತಿ ಪಡೆಯುತ್ತೇನೆ. ಭಾರತ ಮುಂದೆ ದೊಡ್ಡ ಪಂದ್ಯಾಟವನ್ನು ಎದುರು ನೋಡುತ್ತಿದೆ. ಇದೇ ಸಂದರ್ಭ ದೇವರ ದರ್ಶನವಾಗಿರುವುದು ಖುಷಿಯಾಗಿದೆ ಎಂದರು. ಟೀಂನ ಹುಡುಗರಿಗೂ ನನಗೂ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಆಯೋಜನೆಯಾಗುತ್ತದೆ. ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿ ಶಾಸ್ತ್ರಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಊರಿನ ಜನರು ಸನ್ಮಾನಿಸಿದರು.
ರವಿಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ. ಇಲ್ಲಿನ ಸರ್ಕಾರಿ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಿದ್ದರು. ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಮುಂದಿನ ಕ್ರಿಕೆಟ್ ಮಹಾಸಮರಕ್ಕೆ ಸಿದ್ಧಗೊಳ್ಳುತ್ತಿರುವ ರವಿಶಾಸ್ತ್ರಿಯ ತಂಡಕ್ಕೆ ಎರ್ಲಪ್ಪಾಡಿ ಗ್ರಾಮದ ಜನ ಶುಭಕೋರಿದ್ದಾರೆ.