– 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ, 82 ಟಿ20
ವೆಲ್ಲಿಂಗ್ಟನ್: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನೇಕ ಸಂದರ್ಭಗಳಲ್ಲಿ ಕ್ರಿಕೆಟ್ ಜವಾಬ್ದಾರಿ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಕಳವಳದಲ್ಲಿ ಸತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ವಿರಾಟ್ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಸೇರಿದಂತೆ ಪ್ರತಿವರ್ಷವೂ ಸರಾಸರಿ 36 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಒಟ್ಟುಗೂಡಿಸಿ ಕೊಹ್ಲಿ ಪ್ರತಿ ವರ್ಷವೂ ಸುಮಾರು 300 ದಿನಗಳ ಕಾಲ ಕಾರ್ಯನಿರತವಾಗಿದೆ. ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಸರಣಿಯ ಮುನ್ನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಕೊಹ್ಲಿ ಮಾತು
Advertisement
Advertisement
ವಿರಾಟ್ ಕೊಹ್ಲಿ 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಕಿಂಗ್ಸ್‍ಸ್ಟನ್‍ನಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡಿದರು. ಅಂದಿನಿಂದ ಅವರು 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ ಹಾಗೂ 82 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಕೊಹ್ಲಿ ಇಲ್ಲಿಯವರೆಗೆ ಕೇವಲ ಪಂದ್ಯಕ್ಕಾಗಿ 750 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಆದರೆ ಪ್ರಯಾಣ, ಅಭ್ಯಾಸ ಅವಧಿ ಮತ್ತು ಅಭ್ಯಾಸ ಪಂದ್ಯಗಳನ್ನು ಕೂಡಿಸಿದರೆ ಕೊಹ್ಲಿ ಇದುವರೆಗೆ ಸುಮಾರು 4 ಸಾವಿರ ದಿನಗಳಿಂದ ಕ್ರಿಕೆಟ್‍ನಲ್ಲಿ ನಿರತರಾಗಿದ್ದಾರೆ.
Advertisement
ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಜನವರಿ 23ರಂದು ಬಿಡುಗಡೆಯಾದ ವೇಳಾ ಪಟ್ಟಿಯ ವಿಚಾರವಾಗಿ ವಿರಾಟ್ ಕೊಂಚ ಅಸಮಾಧಾನ ಹೊರ ಹಾಕಿದ್ದರು. “ಆಟಗಾರರು ನೇರವಾಗಿ ಕ್ರೀಡಾಂಗಣಕ್ಕೆ ಇಳಿದು ಪಂದ್ಯವನ್ನು ಆಡುವ ದಿನ ದೂರವಿಲ್ಲ” ಎಂದು ಕೊಹ್ಲಿ ಹೇಳಿದ್ದರು. ಈ ಬೆನ್ನಲ್ಲೇ ವೆಲ್ಲಿಂಗ್ಟನ್‍ನಲ್ಲಿನ ಜವಾಬ್ದಾರಿ ಹೊರೆಯ ಮಾತನಾಡಿ, “ಇದನ್ನು ನೀವು ಯಾವುದೇ ರೀತಿಯಲ್ಲಿ ಮರೆಮಾಡಲು ಸಾಧ್ಯವಿಲ್ಲ. ನಾನು ವರ್ಷಕ್ಕೆ 300 ದಿನ ಆಡುತ್ತಿದ್ದೇನೆ. ಇದು ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಸಹ ಒಳಗೊಂಡಿದೆ. ಕೆಲಸದ ಹೊರೆ ಸಾರ್ವಕಾಲಿಕ ಒಂದೇ ಆಗಿರುತ್ತದೆ” ಎಂದು ತಿಳಿಸಿದ್ದರು.
Advertisement
ಕಳೆದ ವರ್ಷ ಜೂನ್‍ನಿಂದ ಟೀಂ ಇಂಡಿಯಾ ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುಎಸ್‍ಎ ಮತ್ತು ಭಾರತದಲ್ಲಿ 22 ಏಕದಿನ, 20 ಟಿ20 ಹಾಗೂ 7 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ಒಂದು ದಿನದ ಅಭ್ಯಾಸವನ್ನು ಸೇರಿಸಲಾಗುತ್ತದೆ. 9 ತಿಂಗಳಲ್ಲಿ ಭಾರತವು 132 ದಿನಗಳ ಕಾಲ ಮೈದಾನದಲ್ಲಿದೆ.
3 ಸ್ವರೂಪಗಳಲ್ಲಿ 414 ಪಂದ್ಯ:
ವರ್ಷದ ಪಂದ್ಯ
2008- 5
2009- 10
2010- 27
2011- 43
2012- 40
2013- 43
2014- 38
2015- 31
2016- 37
2017- 46
2018- 37
2019- 44
2020- 13
2017, 2018ರಲ್ಲಿ 53 ಪಂದ್ಯಗಳನ್ನಾಡಿದ ಭಾರತ:
ಕಳೆದ 4 ವರ್ಷಗಳ ಅಂಕಿಅಂಶಗಳು ವಿರಾಟ್ ಕೊಹ್ಲಿ ಅವರ ಹೇಳಿಕೆಯನ್ನು ಸಮರ್ಥಿಸುವಂತಿವೆ. ಟೀಂ ಇಂಡಿಯಾ 2016 ಮತ್ತು 2019ರ ನಡುವೆ 12 ದೇಶಗಳಿಗೆ ಪ್ರವಾಸ ಕೈಗೊಂಡು ಮೂರು ಸ್ವರೂಪಗಳಲ್ಲಿ 204 ಪಂದ್ಯಗಳನ್ನು ಆಡಿದೆ. 2018ರಲ್ಲಿ ಭಾರತೀಯ ಕ್ರಿಕೆಟ್ ತಂಡವು ಹೆಚ್ಚು ಅಂದ್ರೆ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವರ್ಷ ಆಟಗಾರರು ಗರಿಷ್ಠ 97 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಅಂದರೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭಾರತೀಯ ತಂಡವು ಮೈದಾನದಲ್ಲಿ ಕಾಣಿಸಿಕೊಂಡಿದೆ.
ಭಾರತವು ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ 2016ರಲ್ಲಿ 46 ಪಂದ್ಯಗಳನ್ನು ಆಡಿದೆ. ಈ ಸಮಯದಲ್ಲಿ ತಂಡವು 90 ದಿನಗಳ ಕಾಲ ಮೈದಾನದಲ್ಲಿ ಉಳಿದಿತ್ತು. ಅಂದರೆ ಸರಾಸರಿ ಭಾರತ ತಂಡವು ಪ್ರತಿ ನಾಲ್ಕನೇ ದಿನ ಪಂದ್ಯವನ್ನು ಆಡುತ್ತಿತ್ತು. ಟೀಂ ಇಂಡಿಯಾ 2017ರಲ್ಲಿ 53 ಪಂದ್ಯಗಳನ್ನು ಆಡಿದ್ದು, 75 ದಿನಗಳನ್ನು ಮೈದಾನದಲ್ಲಿ ಕಳೆದಿದೆ. ಈ ಅರ್ಥದಲ್ಲಿ ಆಟಗಾರರು ಪ್ರತಿ ಐದನೇ ದಿನ ಪಂದ್ಯವನ್ನು ಆಡುತ್ತಿದ್ದರು. 2019ರಲ್ಲಿ ಭಾರತ ತಂಡವು 52 ಪಂದ್ಯಗಳನ್ನು ಆಡಿ 79 ದಿನಗಳ ಕಾಲ ಮೈದಾನದಲ್ಲಿ ಉಳಿಯಿತು. ಅಂದರೆ ಪ್ರತಿ ಐದನೇ ದಿನ ಪಂದ್ಯಗಳನ್ನು ಆಡಿದೆ.
ಈ ಎಲ್ಲ ಅಂಕಿ ಅಂಶಗಳನ್ನು ನೋಡಿದಾಗ ಟೀಂ ಇಂಡಿಯಾ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಹ್ಲಿ ಅಷ್ಟೇ ಅಲ್ಲದೆ ಕೆ.ಎಲ್.ರಾಹುಲ್ ಕೂಡ ನಿರಂತರ ಪಂದ್ಯದ ಬಗ್ಗೆ ಕೊಂಚ ಅಸಮಾಧಾನ ಹೊರ ಹಾಕಿದ್ದರು.