ಡೊಮಿನಿಕಾ: ವೆಸ್ಟ್ ಇಂಡೀಸ್ (West Indies) ವಿರುದ್ಧದ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಹಲವು ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ.
ವಿಂಡೀಸ್ ವಿರುದ್ಧ ಮೊದಲ ದಿನದಾಟದಲ್ಲಿ 24.3 ಓವರ್ ಬೌಲಿಂಗ್ ಎಸೆದ ಅಶ್ವಿನ್ 60 ರನ್ ಕೊಟ್ಟು 5 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ, ಈ ಸಾಧನೆ ಮೆರೆದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ. ಅಲ್ಲದೇ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ತ್ಯಾಗಿ ನಾರಾಯಣ್ ಚಂದ್ರಪಾಲ್ (12) (Tagenarine Chanderpaul) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ತಂದೆ ಮತ್ತು ಮಗ ಇಬ್ಬರನ್ನೂ ಔಟ್ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಆರಂಭ ಕಂಡಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಇಲ್ಲಿನ ವಿಂಡ್ಸರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ದಿನವೇ 150 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಇದನ್ನೂ ಓದಿ: ICC WorldCup 2023: ಈಡನ್ ಗಾರ್ಡನ್ಸ್‌ನ ಲೀಗ್, ಸೆಮಿಫೈನಲ್ ಪಂದ್ಯಗಳಿಗೆ ಟಿಕೆಟ್ ದರ ನಿಗದಿ
ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ ತ್ಯಾಗಿ ನಾರಾಯಣ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಮ್ಮ ಬೇಟೆ ಶುರು ಮಾಡಿದ ಅಶ್ವಿನ್, ಟೇಲೆಂಡರ್ ಅಲ್ಝಾರಿ ಜೋಸೆಫ್ ಅವರ ವಿಕೆಟ್ ಉರುಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ನೇ ವಿಕೆಟ್ ಮೈಲುಗಲ್ಲು ತಲುಪಿದರು. ಭಾರತದ ಪರ ಆಡಿದ 271ನೇ ಪಂದ್ಯದಲ್ಲಿ ಅಶ್ವಿನ್ ಈ ವಿಶೇಷ ಸಾಧನೆ ಮೆರೆದಿದ್ದಾರೆ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..
ದಿಗ್ಗಜರ ಪಟ್ಟಿ ಸೇರಿದ ಸ್ಪಿನ್ ಮಾಂತ್ರಿಕ:
ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 401 ಪಂದ್ಯಗಳಲ್ಲಿ 953 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದರೆ, 711 ವಿಕೆಟ್ ಪಡೆದ ಹರ್ಭಜನ್ ಸಿಂಗ್ 2ನೇ ಸ್ಥಾನದಲ್ಲಿದ್ದಾರೆ, ಇದೀಗ ಒಟ್ಟು 702 ವಿಕೆಟ್ ಕಬಳಿಸಿರುವ ರವಿಚಂದ್ರನ್ ಅಶ್ವಿನ್ 3ನೇ ಸ್ಥಾನ ಅಲಂಕರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಮಗ್ರ ಪಟ್ಟಿಯಲ್ಲಿ 16ನೇ ಸ್ಥಾನ ಪಡೆಯುವ ಮೂಲಕ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್ ಸಿಗ್ನಲ್
ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 1,347 ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದರೆ, 1,001 ವಿಕೆಟ್ ಕಿತ್ತ ಆಸ್ಟ್ರೇಲಿಯಾದ ಶೇನ್ ವಾರ್ನ್ 2ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ 975 ವಿಕೆಟ್, ಭಾರತದ ಅನಿಲ್ ಕುಂಬ್ಳೆ 953 ವಿಕೆಟ್, ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ 949 ವಿಕೆಟ್, ಪಾಕಿಸ್ತಾನದ ವಸೀಮ್ ಅಕ್ರಮ್ 916 ವಿಕೆಟ್, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 841 ವಿಕೆಟ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ 829 ವಿಕೆಟ್, ಪಾಕಿಸ್ತಾನದ ವಕಾರ್ ಯೂನಿಸ್ 789 ವಿಕೆಟ್, ಶ್ರೀಲಂಕಾದ ಚಮಿಂಡಾ ವಾಸ್ 761 ವಿಕೆಟ್, ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ 746 ವಿಕೆಟ್, ಆಸ್ಟ್ರೇಲಿಯಾದ ಬ್ರೆಟ್ ಲೀ 718 ವಿಕೆಟ್, ನ್ಯೂಜಿಲೆಂಡ್‌ನ ಟಿಮ್ ಸೌಥಿ 714 ವಿಕೆಟ್, ಭಾರತದ ಹರ್ಭಜನ್ ಸಿಂಗ್ 711 ವಿಕೆಟ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ 705 ವಿಕೆಟ್ ಪಡೆದು ನಂತರದ ಸ್ಥಾನಗಳಲ್ಲಿದ್ದಾರೆ.
Web Stories