ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ದಾಖಲೆ ಮಾಡಿದೆ. ಟಿ20 ಪಂದ್ಯದಲ್ಲಿ ಭಾರತ ತನ್ನ ಅರ್ಧ ಶತಕದ ಗೆಲುವನ್ನು ದಾಖಲಿಸಿದೆ. ಅರ್ಥಾತ್ ಭಾರತ ಇದುವರೆಗೆ 50 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಭಾರತ ಇದುವರೆಗೆ ಒಟ್ಟು 84 ಪಂದ್ಯವನ್ನು ಆಡಿದ್ದು 31 ಪಂದ್ಯಗಳಲ್ಲಿ ಸೋಲು ಕಂಡಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಇದು ಭಾರತದ 10ನೇ ಗೆಲುವು. ಇದುವರೆಗೆ ಎರಡು ರಾಷ್ಟ್ರಗಳ ನಡುವೆ 14 ಪಂದ್ಯಗಳು ನಡೆದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋತಿದೆ.
2012ರ ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾ ಸೋತಿದ್ದೇ ಕೊನೆ. ಅಲ್ಲಿಂದ ನಿನ್ನೆ ನಡೆದ ಪಂದ್ಯದವರೆಗೆ ಆಸೀಸ್ ಒಂದು ಪಂದ್ಯವನ್ನೂ ಗೆದ್ದಿಲ್ಲ. ಉಭಯ ರಾಷ್ಟ್ರಗಳ ನಡುವೆ 2012ರ ಭಾರತದ ಸೋಲಿನ ಬಳಿಕ 7 ಪಂದ್ಯಗಳು ನಡೆದಿದ್ದು 7ರಲ್ಲೂ ಭಾರತವೇ ಗೆಲುವು ಸಾಧಿಸಿದೆ. ಟಿ20 ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಅಕ್ಟೋಬರ್ 10ರಂದು ಗುವಾಹಟಿ ಹಾಗೂ ಅಕ್ಟೋಬರ್ 13ರಂದು ಹೈದರಾಬಾದ್ ನಲ್ಲಿ ಪಂದ್ಯಗಳು ನಡೆಯಲಿವೆ.
ಪ್ರಸ್ತುತ ಆಸೀಸ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದೆ. ಭುವನೇಶ್ವರ್ ಕುಮಾರ್, ಬೂಮ್ರಾ, ಹಾರ್ದಿಕ್ ಪಾಂಡ್ಯ, ಧೋನಿ, ಕೊಹ್ಲಿ, ರೋಹಿತ್ ಶರ್ಮಾ, ಕುಲದೀಪ್ ಯಾದವ್ ಹಾಗೂ ಚಾಹಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅದರಲ್ಲೂ ಕುಲದೀಪ್ ಯಾದವ್ ಹಾಗೂ ಚಾಹಲ್ ಬೌಲಿಂಗ್ ಮುಂದೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದಾರೆ.
ಟೀ ಇಂಡಿಯಾ ಪರವಾಗಿ ಜಸ್ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯಾ ಹಾಗೂ ಚಾಹಲ್ ತಲಾ 1 ವಿಕೆಟ್ ಪಡೆದರು. ಸ್ಪಿನ್ನರ್ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.



