ಬೆಂಗಳೂರು: ವರ್ಷದಿಂದ ಕಗ್ಗಂಟಾಗಿ ಉಳಿದಿರುವ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ನಾಳೆಯಿಂದ ಕೌನ್ಸಿಲಿಂಗ್ ನಡೆಯಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡ್ಡಾಯ ವರ್ಗಾವಣೆ ಬಗ್ಗೆ ಅನೇಕ ಗೊಂದಲಗಳು ಇತ್ತು. ಅನೇಕ ಜನ ಕಡ್ಡಾಯ ವರ್ಗಾವಣೆ ಬಗ್ಗೆ ನನ್ನ ಬಳಿ ದೂರು ನೀಡಿದ್ದರು. ಹೀಗಾಗಿ ನಾನು ವರ್ಗಾವಣೆ ನಿಲ್ಲಿಸಿದ್ದೆ. ಈ ಸುದ್ದಿಗೋಷ್ಠಿಯನ್ನು ಸಹ ಸಂತೋಷದಿಂದ ಮಾಡುತ್ತಿಲ್ಲ. ಎರಡು ಗುಂಪುಗಳ ಮಧ್ಯೆ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.
Advertisement
ಕಡ್ಡಾಯ ವರ್ಗಾವಣೆ ಮಾಡದಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಕಡ್ಡಾಯ ವರ್ಗಾವಣೆ ಮಾಡಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ. ಈ ಕುರಿತು 20 ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.
Advertisement
Advertisement
ಎಲ್ಲರಿಗೂ ಸಮಾನ ರೀತಿಯಲ್ಲಿ ಅನುಕೂಲವಾಗುವಂತೆ ವರ್ಗಾವಣೆ ಮಾಡಲು ಚಿಂತನೆ ನಡೆಸಿದ್ದೇನೆ. ಕಡ್ಡಾಯ ವರ್ಗಾವಣೆ ಆಗುವವರಿಗೆ ಕೆಲವು ಆಫರ್ ನೀಡಲಾಗಿದೆ. ಏನೆಂದರೆ, ಅವರಿಗೆ ಇಷ್ಟವಾಗದ ಜಾಗದಲ್ಲಿ ವರ್ಗಾವಣೆ ಸಿಗದೇ ಇದ್ದರೆ ಪಕ್ಕದ ತಾಲೂಕು, ಅಥವಾ ಹತ್ತಿರದ ಜಿಲ್ಲೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಅಲ್ಲದೆ, ವರ್ಗಾವಣೆ ಬಯಸಿದವರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
Advertisement
ಮುಂದಿನ ವರ್ಷದಿಂದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಇನ್ನೊಂದು ವರ್ಷದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರುತ್ತೇವೆ. ಶಿಕ್ಷಕ ಸ್ನೇಹಿ ವರ್ಗಾವಣೆ ಜಾರಿಗೆ ತರಲು ಕೆಲಸ ಮಾಡುತ್ತೇನೆ. ಮುಂದಿನ ವರ್ಷದೊಳಗೆ ತಿದ್ದುಪಡಿ ತರುತ್ತೇವೆ ಎಂದು ಭರವಸೆ ನೀಡಿದರು.
2017ರಲ್ಲಿ ಬಂದ ಈ ವರ್ಗಾವಣೆ ಕಾಯ್ದೆ ಯಾವುದೇ ಚರ್ಚೆ ಇಲ್ಲದೆ ಅಧಿವೇಶನದಲ್ಲಿ ಪಾಸ್ ಆಗಿದೆ. ಯಾವುದೇ ಚರ್ಚೆ ಇಲ್ಲದೆ ಪಾಸ್ ಆಗಿರೋದಕ್ಕೆ ಇಂದು ಸಮಸ್ಯೆ ತಂದಿಟ್ಟಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅನಿವಾರ್ಯವಿದೆ. ಕಡ್ಡಾಯ ವರ್ಗಾವಣೆ ಪದ ಅನ್ನೋದೇ ಸರಿಯಿಲ್ಲ. ಈ ಕಡ್ಡಾಯ ವರ್ಗಾವಣೆ ಅನ್ನೋದು ಒಂದು ರೀತಿ ಶಿಕ್ಷೆ ಇದ್ದ ಹಾಗೆ. ಹೀಗಾಗಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಡ್ಡಾಯ ವರ್ಗಾವಣೆ ತಿದ್ದುಪಡಿ ಕಾಯ್ದೆಗೆ ಆದಷ್ಟು ಬೇಗ ತಿದ್ದುಪಡಿ ತರುತ್ತೇವೆ ಎಂದು ಮಾಹಿತಿ ನೀಡಿದರು.
ಖಾಯಿಲೆ ಇರುವವರು ಹಾಗೂ ಬೇರೆ ಸಮಸ್ಯೆ ಇರುವವರಿಗಾಗಿ ಕಡ್ಡಾಯ ವರ್ಗಾವಣೆಗೆ ಗುರುತಿಸಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯ ವರ್ಗಾವಣೆಗೆ 12,622 ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 6,832 ಜನ ವಿವಿಧ ಕಾರಣಕ್ಕೆ ವಿನಾಯಿತಿ ಪಡೆದಿದ್ದಾರೆ. ಒಟ್ಟು 5,790 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರಷ್ಟು ವರ್ಗಾವಣೆಯ ನಿಯಮದಂತೆ 4,084 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಬಳ್ಳಾರಿಯಲ್ಲೇ ಹೆಚ್ಚು ವರ್ಗಾವಣೆ ನಡೆಯುತ್ತಿದ್ದು, 320 ಒಂದೇ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ಮಟ್ಟದಲ್ಲಿ 3,692 ಕಡ್ಡಾಯ ವರ್ಗಾವಣೆಗೆ ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 2100 ಜನರಿಗೆ ವಿನಾಯಿತಿ ನೀಡಲಾಗಿದೆ. 1,592 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರ ನಿಯಮದಡಿ 1,234 ಜನ ವರ್ಗಾವಣೆ ಆಗಬೇಕು ಎಂದು ಮಾಹಿತಿ ನಿಡಿದರು.
ವರ್ಗಾವಣೆಗೆ ಅರ್ಹರಾಗಿರುವವರಿಗೆ ಬಿ ಮತ್ತು ಸಿ ಝೋನ್ ನಲ್ಲಿ ಸ್ಥಳವಿಲ್ಲ. ಹೀಗಾಗಿ ಮತ್ತೊಂದು ಸಮಸ್ಯೆ ಆಗಿದೆ. ಈವರೆಗೆ 1,6066 ಶಿಕ್ಷಕರ ವರ್ಗಾವಣೆ ಆಗಿದೆ. ಉಳಿದಂತೆ 4,260 ಕಡ್ಡಾಯ ವರ್ಗಾವಣೆ, ಪರಸ್ಪರ ವರ್ಗಾವಣೆ 3,777 ಮತ್ತು ಅಂತರ್ ಘಟಕ ವರ್ಗಾವಣೆ 1,4076 ಬಾಕಿ ಇದ್ದು, ವರ್ಗಾವಣೆ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಸಚಿವರು ತಿಳಿಸಿದರು.
ಇದೇ ವೇಳೆ 10 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ಆಗಿದೆ. ಅಕ್ಟೋಬರ್ ಅಂತ್ಯದೊಳಗೆ ಎಲ್ಲರಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಂತರ ಕೆಲವು ಶಿಕ್ಷಕರು ಕಡ್ಡಾಯ ವರ್ಗಾವಣೆ ಬೇಡ ಎಂದು ಸಚಿವ ಸುರೇಶ್ ಕುಮಾರ್‍ಗೆ ಮನವಿ ಮಾಡಿದರು. ಕಣ್ಣೀರು ಹಾಕಿ ವರ್ಗಾವಣೆ ಬೇಡ ಎಂದು ಗೋಗರೆದರು. ಆದರೆ, ಇದ್ಯಾವುದಕ್ಕೂ ಒಪ್ಪದ ಸಚಿವರು, ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಲಯವಾರು ಆಧಾರದ ಮೇಲೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಎ ಝೋನ್ ಎಂದರೆ ನಗರ ಪ್ರದೇಶ, ಬಿ ಝೋನ್ ಎಂದರೆ ತಾಲೂಕು, ಸಿ ಝೋನ್ ಎಂದರೆ ಗ್ರಾಮೀಣ ಭಾಗ ಎಂದರ್ಥ.