ಮೈಸೂರು: ಸರ್ಕಾರಿ ಜಾಗದಲ್ಲಿ ಗೋಮಾಂಸ ತಿಂದ ಪ್ರಕರಣ ಮಾಸುವ ಮುನ್ನವೆ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮಾಂಸದೂಟ ಪ್ರಕರಣ ನಡೆದಿದೆ. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರು ಮಾಂಸದೂಟ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸೆಂಟ್ ಮೇರಿಸ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಶಿಕ್ಷಕರು ಶಾಲೆಯ ಕಚೇರಿಯ ಒಳಗಡೆ ಕುಳಿತು ಮಾಂಸದೂಟ ಸವಿದಿದ್ದಾರೆ. ಬಿಸಿ ಊಟ ತಯಾರಿಸುವ ಸಿಬ್ಬಂದಿಯಿಂದಲೇ, ಬಿಸಿಯೂಟಕ್ಕೆ ಸರ್ಕಾರ ನೀಡುವ ಸಾಮಗ್ರಿಗಳನ್ನು ಬಳಸಿ ಈ ಮಾಂಸದೂಟ ಮಾಡಿಸಲಾಗಿದೆ.
ಶಾಲೆಯ ಸಿಬ್ಬಂದಿಯೊಬ್ಬರ ವರ್ಗಾವಣೆ ಹಾಗೂ ಇಬ್ಬರು ನೂತನ ಶಿಕ್ಷಕರ ಆಗಮನದ ಅಂಗವಾಗಿ ಈ ಮಾಂಸದೂಟ ಮಾಡಿಸಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಅನುದಾನಿತ ಕಚೇರಿಗಳಲ್ಲಿ ಮಾಂಸದೂಟ ಸೇವಿಸುವಂತಿಲ್ಲ. ಇಂತಹದರಲ್ಲಿ ಹೀಗೆ ಬಿಸಿ ಊಟದ ಸಾಮಗ್ರಿಗಳನ್ನು ಬಳಸಿ ಮಾಂಸದೂಟ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾಹಿತಿ ತಿಳಿದು ಹೆಚ್.ಡಿ.ಕೋಟೆಯ ಪ್ರೌಢಶಾಲಾ ವ್ಯಾಪ್ತಿಯ ಬಿ.ಆರ್.ಸಿ ಅಧಿಕಾರಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತಾಲೂಕು ಬಿಇಓಗೆ ಮಾಹಿತಿ ನೀಡಿದ್ಧಾರೆ. ಇಂದು ಬಿಇಓ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.