Latest
ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಎಲ್ಲರ ಮನೆ ಮಾತಾಗಿದ್ದಾರೆ. ಸಿಂಧು ಯಶಸ್ಸಿನ ಹಿಂದಿದ್ದುದು ಅವರ ಕೋಚ್ ಪುಲ್ಲೆಲಾ ಗೋಪಿಚಂದ್. ಶಿಕ್ಷಕರ ದಿನಾಚರಣೆಯಾದ ಇಂದು ಪಿವಿ ಸಿಂಧು ತನ್ನ ಗುರು ಗೋಪಿಚಂದ್‍ಗೆ ಗುರುಕಾಣಿಕೆಯಾಗಿ ವಿಡಿಯೋವೊಂದನ್ನ ಅರ್ಪಿಸಿದ್ದಾರೆ.
ಪಿವಿ ಸಿಂಧು ಸ್ಪೋರ್ಟ್ಸ್ ಡ್ರಿಂಕ್ ಬ್ರ್ಯಾಂಡ್‍ವೊಂದರ ಜೊತೆಗೂಡಿ ಐ ಹೇಟ್ ಮೈ ಟೀಚರ್ ಎಂಬ ಡಿಜಿಟಲ್ ಕಿರು ಚಿತ್ರವನ್ನ ಸಹ-ನಿರ್ಮಾಣ ಮಾಡಿದ್ದಾರೆ.
ಯಶಸ್ಸಿನ ದಾರಿ ತುಂಬಾ ಕಠಿಣವಾದುದು. ಅದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಸಮರ್ಪಣೆ ಬೇಕು. ಆದ್ರೆ ಬಹುತೇಕ ಮಂದಿ ಯಾವುದೋ ಒಂದು ಘಟ್ಟದಲ್ಲಿ ಇದು ನನ್ನಿಂದ ಆಗಲ್ಲ ಅಂತ ಕೈಚೆಲ್ಲಿಬಿಡುತ್ತಾರೆ. ಆದ್ರೆ ಯಾವುದೋ ಒಂದು ಶಕ್ತಿ ಅವರನ್ನ ಮುಂದೆ ತಳ್ಳುತ್ತದೆ. ಅವರು ಯಶಸ್ವಿಯಾಗಿ ಹೊರಹೊಮ್ಮುವಂತೆ ಮಾಡುತ್ತದೆ ಅನ್ನೋದನ್ನ ವಿಡಿಯೋದಲ್ಲಿ ತೋರಿಸಲಾಗಿದೆ.
ಇಂತಹ ಸಂದರ್ಭಗಳಲ್ಲಿ ಕ್ರೀಡಾಪಟು ತನ್ನ ಗುರುವಿನ ಕಠಿಣತೆ ಹಿಂದಿನ ಉದ್ದೇಶವನ್ನ ಅರಿಯದೆ ಅವರನ್ನ ದ್ವೇಷಿಸುತ್ತಾರೆ. ಆದ್ರೆ ಕೊನೆಗೆ ತನ್ನ ಬೆನ್ನ ಹಿಂದೆ ನಿಂತು ಯಶಸ್ಸಿಗೆ ಕಾರಣವಾದ ಗುರುವಿಗೆ ಕೃತಜ್ಞತೆ ಸಲ್ಲಿಸದೆ ಇರಲಾಗದು ಅನ್ನೋದನ್ನ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ.
ಐ ಹೇಟ್ ಮೈ ಟೀಚರ್. ನನ್ನ ಗಾಯಗಳಿಗೆ ಅವರೇ ಕಾರಣ. ನನ್ನ ಮೇಲೆ ರೇಗಾಡ್ತಾರೆ. ನಾನು ಬೆವರು ಸುರಿಸಿದ್ರೆ ಅವರಿಗಿಷ್ಟ. ನಾನು ಬಿದ್ದಾಗ, ನನಗೆ ಉಸಿರಾಡಲೂ ಕಷ್ಟವಾದಾಗ ಅದು ಅವರಿಗೆ ಇಷ್ಟ. ನನ್ನ ನೋವಿಗೆ ಅವರೇ ಕಾರಣ. ನಾನು ನಿದ್ದೆ ಮಾಡ್ತೀನೋ ಇಲ್ವೋ ಅವರಿಗೆ ಬೇಕಾಗಿಲ್ಲ. ಅವರು ಎಂದಿಗೂ ಕೈಚೆಲ್ಲಿ ಕೂರಲ್ಲವಲ್ಲ ಅದಕ್ಕೆ ನಾನು ಅವರನ್ನ ದ್ವೇಷಿಸುತ್ತೇನೆ. ಅವರು ಯಾವಾಗ್ಲೂ ಸರಿಯಾಗೇ ಯೋಚಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವರನ್ನ ದ್ವೇಷಿಸೋದು ಯಾಕಂದ್ರೆ ನಾನು ನನ್ನನ್ನು ನಂಬೋದಕ್ಕಿಂತ ಹೆಚ್ಚಿಗೆ ಅವರು ನನ್ನನ್ನು ನಂಬ್ತಾರೆ. ಥ್ಯಾಂಕ್ಯೂ ಕೋಚ್ ಎಂದು ವಿಡಿಯೋ ಅಂತ್ಯವಾಗುತ್ತದೆ.
ಕೋಚ್ ಪಟ್ಟುಬಿಡದೆ ಕೆಲಸ ಮಾಡಿ ನನಗಾಗಿ ದೊಡ್ಡ ದೊಡ್ಡ ಕನಸು ಹೊಂದಿದ್ದಾರೆ. ಅವರ ಈ ಶ್ರೇಷ್ಠತೆಗೆ ನಾನು ಋಣಿ. ಈ ಶಿಕ್ಷಕರ ದಿನಾಚರಣೆಯಂದು ನನ್ನ ಎಲ್ಲಾ ಯಶಸ್ಸನ್ನು ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಪ್ರೇರಕ ಶಕ್ತಿಯಾಗಿರುವವರನ್ನ ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಅಂತ ಪಿವಿ ಸಿಂಧು ಹೇಳಿದ್ದಾರೆ.
#TeachersDay is here & this is a story of students who hate their teacher. @Pvsindhu1 is 1 of them. Tag ur teacher who made u #SweatForGold pic.twitter.com/AijgbLgnpD
— Gatorade India (@GatoradeIndia) September 4, 2017
