ರಾಯಚೂರು: ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರು ಹೂತಿಟ್ಟ ಘಟನೆ ಜಿಲ್ಲೆಯ ಲಿಂಗಸುಗೂರಿನ ಯರಡೋಣಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸರ್ಕಾರದಿಂದ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನ ಯರಡೋಣಾ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ಗುಂಡಿ ತೆಗೆದು ಅಲ್ಲಿನ ಶಿಕ್ಷಕರು ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರದಿಂದ ಶಾಲಾ ಮಕ್ಕಳಿಗೆ ಬರುವ ದಾಸ್ತಾನುಗಳ ಚೀಲದಲ್ಲೆ ಹಾಲಿನ ಪುಡಿಯನ್ನ ತುಂಬಿ ಹೂತಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ನೀಡುವ ಇನ್ನಿತರ ದಾಸ್ತಾನುಗಳನ್ನೂ ಕೂಡ ಶಿಕ್ಷಕರು ನೆಲದಲ್ಲಿ ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಯರಡೋಣಾ ಪ್ರೌಢ ಶಾಲೆಯಲ್ಲಿ ಒಟ್ಟು 290 ವಿದ್ಯಾರ್ಥಿಗಳು ಇದ್ದಾರೆ. ಆದರೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಮಣ್ಣಿಗೆ ಹಾಕಿ ಹಾಳು ಮಾಡಿದ್ದಾರೆ. ಕೆಲವು ದಿನಗಳಿಂದ ಶಾಲಾ ಆವರಣದಲ್ಲಿ ದುರ್ನಾತ ಬರುತ್ತಿತ್ತು. ಆದ್ದರಿಂದ ಗ್ರಾಮಸ್ಥರು ಶಾಲಾ ಶಿಕ್ಷಕರಿಗೆ ತಿಳಿಸಿದದ್ರೂ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೆ ದುರ್ವಾಸನೆ ತಾಳಲಾರದೆ ಗ್ರಾಮಸ್ಥರೇ ಶಾಲಾ ಆವರಣದಲ್ಲಿ ಗುಂಡಿ ಅಗೆದು ನೋಡಿದಾಗ ಹಾಲಿನ ಪುಡಿಯನ್ನು ಹೂತಿಟ್ಟ ಸತ್ಯಾಂಶ ಬಯಲಿಗೆ ಬಂದಿದೆ.
ಇದನ್ನು ಕಂಡು ಗ್ರಾಮಸ್ಥರ ಕೋಪ ನೆತ್ತಿಗೇರಿದೆ. ಸರ್ಕಾರ ಮಕ್ಕಳಿಗೆ ಕೊಟ್ಟ ಪದಾರ್ಥವನ್ನು ಶಿಕ್ಷಕರು ಮೂರ್ಖರಂತೆ ಹೂತಿಟ್ಟಿದ್ದಾರೆ. ಈ ಮೂಲಕ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಹೀಗೆ ತಪ್ಪು ಮಾಡಿರುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಿಕ್ಷಕರು ಯಾಕೆ ಹೀಗೆ ಮಾಡಿದ್ದಾರೆ ಅಂತ ಯಾರಿಗೂ ತಿಳಿದಿಲ್ಲ. ಆದ್ರೆ ಪಾಠ ಕಲಿಸಬೇಕಾದ ಶಿಕ್ಷಕರೇ ಈ ರೀತಿ ಮಾಡಿದರೆ ಮಕ್ಕಳಿಗೆ ಇನ್ನೇನು ಕಲಿಸುತ್ತಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv