ಚಂಡೀಗಢ: ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.
ಹರ್ಮಿಂದರ್ ಕೌರ್(26) ಮೃತಪಟ್ಟ ಶಿಕ್ಷಕಿ. ಹರ್ಮಿಂದರ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆ ಮುಗಿದ ನಂತರ ಹರ್ಮಿಂದರ್ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮನೆಗೆ ಹೋಗುತ್ತಿದ್ದರು.
ಈ ವೇಳೆ ಹಳಿ ದಾಟುವಾಗ ಅಂಬಾಲಾದಿಂದ ಪ್ಯಾಸೆಂಜರ್ ರೈಲು ಬರುತ್ತಿತ್ತು. ಇಯರ್‌ಫೋನ್ ಹಾಕಿದ್ದ ಕಾರಣ ಹರ್ಮಿಂದರ್ ಗೆ ರೈಲಿನ ಶಬ್ದ ಕೇಳಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಹರ್ಮಿಂದರ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಯಿತು.
ಈ ಬಗ್ಗೆ ಜಿಆರ್ ಪಿ ಪೊಲೀಸ್ ಅಧಿಕಾರಿ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಶಿಕ್ಷಕಿ ಇಯರ್‌ಫೋನ್ ಹಾಕಿದ ಕಾರಣ ರೈಲಿನ ಶಬ್ದ ಕೇಳಿಸಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.