ಯಾದಗಿರಿ: ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣವನ್ನು ಶಾಲಾ ಶಿಕ್ಷಕನೊಬ್ಬ ಜೀಬಿಗೆ ಇಳಿಸಿಕೊಂಡು ಪರಾರಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗಡಿ ಗ್ರಾಮದ ಹಗರಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2019ರ ಡಿಸೆಂಬರ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ವಿದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಿಸಿದ ಹಣವನ್ನು ಶಾಲಾ ದೈಹಿಕ ಶಿಕ್ಷಕ ಎಂ.ಬಿ ದೇಸಾಯಿ ಲಪಟಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
Advertisement
Advertisement
ಈ ಶಾಲೆಯಲ್ಲಿ ಒಟ್ಟು 168 ವಿದ್ಯಾರ್ಥಿಗಳಿದ್ದು, ಒಂದು ವಾರದ ಟೂರ್ ಗಾಗಿ 63 ವಿದ್ಯಾರ್ಥಿಗಳಿಂದ ತಲಾ 2,900ರಂತೆ ಒಟ್ಟು 1,82,700 ರೂಪಾಯಿ ಸಂಗ್ರಹಿಸಲಾಗಿತ್ತು. ಈ ಪ್ರವಾಸದ ಜವಾಬ್ದಾರಿಯನ್ನು ದೈಹಿಕ ಶಿಕ್ಷಕ ಎಂ.ಬಿ.ದೇಸಾಯಿಗೆ ವಹಿಸಲಾಗಿತ್ತು. ಬಸ್ ಬುಕ್ ಮಾಡುತ್ತೇನೆ ಎಂದು 2019 ಡಿ. 26ರಂದು ಹಣ ತೆಗೆದುಕೊಂಡು ಹೋಗಿದ್ದ ದೇಸಾಯಿ, ಒಂದು ತಿಂಗಳು ಕಳೆದರೂ ಮರಳಿ ಶಾಲೆಗೆ ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ.
Advertisement
Advertisement
ಮಕ್ಕಳು ಮನೆಯಲ್ಲಿ ತಮ್ಮ ಪಾಲಕರ ಬಳಿ ಕಾಡಿ ಬೇಡಿ ಪ್ರವಾಸಕ್ಕೆ ಹಣ ಸಂಗ್ರಹಿಸಿಕೊಂಡು ಶಿಕ್ಷಕರಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಸಾಲ ಮಾಡಿ ತಂದು ಕೊಟ್ಟಿದ್ದಾರೆ. ದೈಹಿಕ ಶಿಕ್ಷಕ ಪ್ರವಾಸಕ್ಕೆ ಕರೆದುಕೊಂಡು ಹೋಗದೆ ನಮಗೆ ಮೋಸ ಮಾಡಿದ್ದಾರೆ ಎಂದು ಬಡ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಹಣ ತೆಗೆದುಕೊಂಡು ಹೋದ ದೈಹಿಕ ಶಿಕ್ಷಕ ಒಂದು ವಾರ ಶಾಲೆಗೆ ಬಂದರೆ ಮೂರು ವಾರ ಬರುವುದಿಲ್ಲ. ಸರಿಯಾಗಿ ಶಾಲೆಗೆ ಬಾರದೆ ಕಾಲಹರಣ ಮಾಡುತ್ತಿರುವ ದೈಹಿಕ ಶಿಕ್ಷಕನ ಮೇಲೆ ಹಲವಾರು ಆರೋಪಗಳಿವೆ. ಹೀಗಿದ್ದರೂ ಇತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಶಾಲಾ ಮುಖ್ಯಶಿಕ್ಷಕನ ಮೇಲೆ ಅನುಮಾನ ಮೂಡಿದೆ.