ಚೆನ್ನೈ: ವ್ಯಕ್ತಿಯೊಬ್ಬ 35 ವರ್ಷದ ಶಿಕ್ಷಕಿ ಪತ್ನಿಯನ್ನು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಮುಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಬಳಿಯ ತಿರುಮಂಗಲಂನಲ್ಲಿ ನಡೆದಿದೆ.
ತಿರುಮಂಗಲಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಜಿ. ರತಿದೇವಿ ಮೃತ ಶಿಕ್ಷಕಿ. ರತಿದೇವಿ ಕರಿಯಪಟ್ಟಿ ಸಮೀಪದ ಸೀತಾನೆಂಡಲ್ ಗ್ರಾಮದವರಾಗಿದ್ದಾರೆ. ಪತಿ ರಾಮನಾಥಪುರಂನ ಓಂಸಕ್ತಿನಗರ ನಿವಾಸಿ ಜಿ.ಗುರುಮುನೀಶ್ವರನ್ ಕೌಟುಂಬಿಕ ಕಾರಣದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ರತಿದೇವಿ ಸೋಮವಾರ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಆಗ ಆರೋಪಿ ಗುರುಮುನೀಶ್ವರನ್ ಕ್ಲಾಸ್‍ರೂಮಿಗೆ ಹೋಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
Advertisement
ಏನಿದು ಪ್ರಕರಣ?
ಗುರುಮುನೀಶ್ವರನ್ ಆರು ವರ್ಷಗಳ ಹಿಂದೆ ರತಿದೇವಿಯನ್ನು ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮೃತ ರತಿದೇವಿ 10 ತಿಂಗಳ ಹಿಂದೆ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯಿಂದ ಬೇರೆಯಿದ್ದರು. ಮೃತ ರತಿದೇವಿ ಸುಮಾರು ಮೂರುವರೆ ವರ್ಷದಿಂದ ಶಿಕ್ಷಕಿಗಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಿವಿಲ್ ಎಂಜಿನಿಯರ್ ಮಾಡಿದ್ದು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದನು. ಈತ ಮೂರು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿ ಪತ್ನಿಯಿಂದ ಬೇರೆಯಾದ ಬಳಿಕ ವಿರುಧುನಗರದಲ್ಲಿ ವಾಸಿಸುತ್ತಿದ್ದನು. ಮಕ್ಕಳು ತಾಯಿ ರತಿದೇವಿ ಬಳಿ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕೊಲೆ:
ಸೋಮವಾರ ಮಧ್ಯಾಹ್ನ ಆರೋಪಿ ಶಾಲೆ ಸೆಕ್ಯೂರಿಟಿ ಬಳಿ ಅನುಮತಿ ಪಡೆದು ಶಾಲೆಯೊಳಗೆ ಹೋಗಿದ್ದಾನೆ. ಶಾಲೆಯ ಕಟ್ಟಡದ 2ನೇ ಮಹಡಿಯಲ್ಲಿ ರತಿದೇವಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಹೋಗಿ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಏಕಾಏಕಿ ಚಾಕು ತೆಗೆದು ವಿದ್ಯಾರ್ಥಿಗಳ ಮುಂದೆಯೇ ರತಿದೇವಿಗೆ ಇರಿದ್ದಾನೆ. ಆಗ ವಿದ್ಯಾರ್ಥಿಗಳು ಭಯದಿಂದ ಕಿರುಚಾಡಿದ್ದಾರೆ. ಮಕ್ಕಳ ಕೂಗಾಟ ಕೇಳಿ ಬೇರೆ ಶಿಕ್ಷಕರು ಬಂದಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ರತಿದೇವಿ ಮೃತಪಟ್ಟಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಮಾಹಿತಿ ತಿಳಿದು ಪೊಲೀಸರು ಶಾಲೆಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ. ಈಗಾಗಲೇ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.