Connect with us

Crime

ಎಲ್ಲರೂ ನೋಡ್ತಿದ್ದಂತೆ ರೂಮಿಗೆ ಎಳ್ದುಕೊಂಡು ಹೋಗಿ ಪ್ರೇಯಸಿಯ ಹತ್ಯೆ

Published

on

ಡೆಹ್ರಾಡೂನ್: ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕನೊಬ್ಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರಖಾಂಡದ ಋಷಿಕೇಶ್ ನಗರದಲ್ಲಿ ನಡೆದಿದೆ.

ಕಲ್ಯಾಣಿ ಕೊಲೆಯಾದ ಯುವತಿ. ಆರೋಪಿ ಅಜಯ್ ಯಾದವ್ ತನ್ನ ಪ್ರೇಯಸಿಯನ್ನೇ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಏನಿದು ಪ್ರರಕಣ?
ಮೃತ ಕಲ್ಯಾಣಿ ನೇಪಾಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಶಾಲೆಯಲ್ಲಿ ಆರೋಪಿ ಕೂಡ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಪರಿಚಯವಿತ್ತು. ಇಬ್ಬರು ಪ್ರೀತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕಲ್ಯಾಣಿಗೆ ಶಾಲೆಗೆ ಹೋಗಬೇಕೆಂದು ಸಿದ್ಧವಾಗುತ್ತಿದ್ದಳು. ಆಗ ಆರೋಪಿ ಸ್ಕೂಟಿಯಲ್ಲಿ ಆಕೆಯಿದ್ದ ಬಾಡಿಗೆ ಮನೆಗೆ ಬಂದಿದ್ದಾನೆ.

ಏಕಾಏಕಿ ಮನೆಯ ಮುಂದೆಯೇ ಕಲ್ಯಾಣಿ ಜೊತೆ ಜಗಳವಾಡಲು ಶುರುಮಾಡಿದ್ದಾನೆ. ಇದರಿಂದ ಮನೆ ಮಾಲೀಕ ಸೇರಿದಂತೆ ಸುತ್ತಮುತ್ತಲಿನ ಜನರು ಬಂದಿದ್ದಾರೆ. ಆದರೆ ಆತ ಕಲ್ಯಾಣಿಯನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಚಾಕುವಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಮುಗಿದು ರೂಮಿನೊಳಗೆ ಹೋಗಿದ್ದಾರೆ. ರೂಮಿನ ತುಂಬಾ ರಕ್ತ ಚೆಲ್ಲಿದ್ದು, ಕಲ್ಯಾಣಿಯ ಮೃತದೇಹ ಪತ್ತೆಯಾಗಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸರು ಬರುವಷ್ಟರಲ್ಲಿ ಆರೋಪಿ ತಪ್ಪಿಸಿಕೊಂಡು ಹೋಗಬಾರದೆಂದು ಜನರು ಆತನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಮೊದಲಿಗೆ ನಾವು ಮೃತ ಕಲ್ಯಾಣಿಯ ತಂದೆಯ ಬಳಿ ಎಲ್ಲ ವಿಚಾರವನ್ನು ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಆಕೆಯ ತಾಯಿ ಮಗಳ ಸಾವನ್ನು ನೋಡಿ ತಕ್ಷಣವೇ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಮಗಳ ಕೊಲೆಯಿಂದ ತಾಯಿ ಆಘಾತಕ್ಕೊಳಗಾಗಿ ಪದೇ ಪದೇ ಪ್ರಜ್ಞೆ ತಪ್ಪುತ್ತಿದ್ದಾರೆ. ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಆತ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in